ADVERTISEMENT

ಮಾನಸಿಕ ಅಸ್ವಸ್ಥನ ಅವಾಂತರ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:59 IST
Last Updated 21 ಜನವರಿ 2018, 19:59 IST

ಬೆಂಗಳೂರು: ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಮಾನಸಿಕ ಅಸ್ವಸ್ಥನೊಬ್ಬ, ‘ಯಾರೋ ನನ್ನ ಪತ್ನಿ–ಮಗಳನ್ನು ರೇಪ್ ಮಾಡಿ ಕೊಂದಿದ್ದಾರೆ’ ಎಂದು ಸುಳ್ಳು ಹೇಳಿ ಯಲಹಂಕ ಪೊಲೀಸರನ್ನು ತಬ್ಬಿಬ್ಬುಗೊಳಿಸಿದ ಪ್ರಸಂಗ ಭಾನುವಾರ ಬೆಳಿಗ್ಗೆ ನಡೆಯಿತು.

ಈ ರೀತಿ ಅವಾಂತರ ಸೃಷ್ಟಿಸಿದವರು ಸುರಭಿ ಲೇಔಟ್‌ನ ರಾಮಕೃಷ್ಣ (45). ಕರೆ ಬಂದ ಕೂಡಲೇ ಯಲಹಂಕ ಠಾಣೆಯ ಪೊಲೀಸರ ದಂಡು ಅವರ ಮನೆಗೆ ದೌಡಾಯಿಸಿತು. ಆದರೆ, ಅಲ್ಲಿನ ಚಿತ್ರಣವೇ ಬೇರೆ ಇತ್ತು. ಕೊಲೆಯಾಗಿದ್ದಾರೆ ಎನ್ನಲಾಗಿದ್ದ ರಾಮಕೃಷ್ಣ ಅವರ ಪತ್ನಿ–ಮಗಳು ಟಿ.ವಿ ನೋಡುತ್ತಾ ಕುಳಿತಿರುವುದನ್ನು ಕಂಡು ಪೊಲೀಸರು ‌ಬೆಸ್ತು ಬಿದ್ದರು. ಕೊನೆಗೆ ಅವರಿಬ್ಬರನ್ನೂ ವಿಚಾರಣೆ ನಡೆಸಿದಾಗ ವಾಸ್ತವ ಗೊತ್ತಾಯಿತು.

‘ಪತಿ ನಾಲ್ಕು ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಲಿಲ್ಲ. ನಮಗೆ ಗೊತ್ತಾಗದಂತೆ ಮೊಬೈಲ್ ತೆಗೆದುಕೊಂಡು ತೋಟಕ್ಕೆ ಹೋಗುವ ಅವರು, ಯಾರ‍್ಯಾರಿಗೋ ಕರೆ ಮಾಡುತ್ತಾರೆ. ದಯವಿಟ್ಟು ನಮ್ಮನ್ನು ಕ್ಷಮಿಸಿ’ ಎಂದು ರಾಮಕೃಷ್ಣ ಅವರ ಪತ್ನಿ ಹೇಳಿದ್ದಾರೆ.

ADVERTISEMENT

ಏನೇನು ಹೇಳಿದ್ದರು: ಬೆಳಿಗ್ಗೆ 9.15ಕ್ಕೆ ‘100’ಗೆ ಕರೆ ಮಾಡಿದ್ದ ರಾಮಕೃಷ್ಣ, ‘ಸರ್‌.. ನನ್ನ ಹೆಂಡ್ತಿ–ಮಗಳನ್ನು ಯಾರೋ ಕಿಡ್ನ್ಯಾಪ್ ಮಾಡಿದ್ರು. ಈಗ ನೋಡಿದ್ರೆ ಅವರಿಬ್ಬರ ಶವಗಳೂ ಮನೆಯಲ್ಲೇ ಬಿದ್ದಿವೆ. ಯಾರೋ ರೇಪ್ ಮಾಡಿ ಕೊಂದಿದ್ದಾರೆ. ಬೇಗ ಸುರಭಿ ಲೇಔಟ್‌ಗೆ ಬಂದು ಶವಗಳನ್ನು ತೆಗೆದುಕೊಂಡು ಹೋಗಿ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ.

ಕೂಡಲೇ ಯಲಹಂಕ ಠಾಣೆಗೆ ವಿಷಯ ತಿಳಿಸಿದ ನಿಯಂತ್ರಣ ಕೊಠಡಿ ಸಿಬ್ಬಂದಿ, ಕರೆ ಬಂದಿದ್ದ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದಾರೆ. ಪಿಎಸ್‌ಐ ಈರಮ್ಮ ಸೇರಿದಂತೆ 12 ಸಿಬ್ಬಂದಿ ಮೂರು ಹೊಯ್ಸಳ ವಾಹನಗಳಲ್ಲಿ ಸುರಭಿ ಲೇಔಟ್‌ಗೆ ತೆರಳಿ ಆ ಸಂಖ್ಯೆಗೆ ಕರೆ ಮಾಡಿದ್ದಾರೆ. ಆಗ ರಾಮಕೃಷ್ಣ, ‘ನಮ್ಮ ಮನೆ ಇಲ್ಲೇ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿದೆ ಬನ್ನಿ’ ಎಂದಿದ್ದಾರೆ. ಅಂತೆಯೇ ಸಿಬ್ಬಂದಿ ಆ ರಸ್ತೆಯಲ್ಲಿ ಸಾಗಿದ್ದಾರೆ.

ಈ ವೇಳೆ ರಸ್ತೆ ಬದಿಯ ಕಟ್ಟೆಯೊಂದರ ಮೇಲೆ ಕುಳಿತಿದ್ದ ರಾಮಕೃಷ್ಣ, ಹೊಯ್ಸಳ ವಾಹನಗಳನ್ನು ನೋಡುತ್ತಿದ್ದಂತೆಯೇ ಅವುಗಳ ಹತ್ತಿರ ಓಡಿದ್ದಾರೆ. ‘ಎಲ್ಲ ಬನ್ನಿ. ಇದೇ ನಮ್ಮ ಮನೆ’ ಎಂದು ತೋರಿಸಿದ್ದಾರೆ. ಸಿಬ್ಬಂದಿ ಒಳಗೆ ಹೋದಾಗ ಸತ್ಯ ಗೊತ್ತಾಗಿದೆ. ಆಗ ಪೊಲೀಸರು ‘ಇನ್ನು ಮುಂದೆ ಹೀಗೆ ಮಾಡಬೇಡಿ’ ಎಂದು ರಾಮಕೃಷ್ಣ ಅವರಿಗೆ ಬುದ್ಧಿ ಹೇಳಿ ಠಾಣೆಗೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.