ADVERTISEMENT

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ತಂತಿ ಬೇಲಿ ಅಳವಡಿಕೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:35 IST
Last Updated 22 ಜನವರಿ 2018, 19:35 IST
ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೆ.ಜೆ.ಜಾರ್ಜ್‌ ಅವರಿಗೆ ವಿವರಿಸಿದರು
ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೆ.ಜೆ.ಜಾರ್ಜ್‌ ಅವರಿಗೆ ವಿವರಿಸಿದರು   

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಎಚ್ಚೆತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕೆರೆಯ ಸುತ್ತಲೂ ತಂತಿ ಬೇಲಿ ಅಳವಡಿಸಲು ನಿರ್ಧರಿಸಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಬಿಡಿಎ, ಬಿಬಿಎಂಪಿ, ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೆಳ್ಳಂದೂರು, ವರ್ತೂರು ಕೆರೆ ಸಿಟಿಜನ್‌ ಗ್ರೂಪ್‌ನ ಸದಸ್ಯರೊಂದಿಗೆ ಸೋಮವಾರ ನಡೆಸಿದ ಸಭೆಯ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಬೆಳ್ಳಂದೂರು ಕೆರೆಗೆ ಬೇಲಿ ಅಳವಡಿಸುವುದು, ನೀರಿನಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಏರೇಟರ್‌ ಹಾಗೂ ಕಾರಂಜಿಗಳ ಅಳವಡಿಕೆ, ಒತ್ತುವರಿ ತೆರವು ಹಾಗೂ ಕೆರೆಯ ರಕ್ಷಣೆಗಾಗಿ ವಾರ್ಡನ್‌ಗಳ ನೇಮಕ ಮಾಡುತ್ತೇವೆ. ಮೂರು ತಿಂಗಳಲ್ಲಿ ಈ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ತಿಳಿಸಿದರು.

ADVERTISEMENT

ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌, ‘ನಗರದಲ್ಲಿ 140 ಕೋಟಿ ಲೀಟರ್‌ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಈ ಪೈಕಿ 106 ಕೋಟಿ ಲೀಟರ್‌ ಕೊಳಚೆ ನೀರನ್ನು ಫೆಬ್ರುವರಿ ತಿಂಗಳಾಂತ್ಯಕ್ಕೆ ಶುದ್ಧೀಕರಿಸಲು ಸಾಧ್ಯವಾಗಲಿದೆ. ಜಲಮಂಡಳಿ ನಿರ್ಮಿಸಿರುವ ಎಸ್‌ಟಿಪಿಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ’ ಎಂದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ‘ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಲ್ಲಿ ಹೆಚ್ಚುವರಿ ನೀರು ಸರಾಗವಾಗಿ ಹರಿದು ಹೋಗಲು ಸ್ಲೂ ಗೇಟ್‌ಗಳನ್ನು ಅಳವಡಿಸಲಾಗುವುದು. ಇಬ್ಬಲೂರು ಕೆರೆ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಣ್ಣ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ಅಳವಡಿಸಲು ಉದ್ದೇಶಿಸಲಾಗಿದೆ’ ಎಂದರು.‌

ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ, ಬೆಳ್ಳಂದೂರು–ಅಮಾನಿಕೆರೆ, ಹೊರಮಾವು ಅಗರ, ಕಾಡುಗೋಡಿ ಹಾಗೂ ದೊಡ್ಡಬೆಲೆಯಲ್ಲಿ ಎಸ್‌ಟಿಪಿಗಳನ್ನು ನಿರ್ಮಿಸಲಾಗಿದೆ. ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

‘ಬೇರೆಯವರನ್ನು ದೂಷಿಸುವುದು ನಿಲ್ಲಿಸಲಿ’

ನಗರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ವ್ಯಕ್ತಿಗಳ ವಿರುದ್ಧ ಮಾತನಾಡುವುದನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ನಿಲ್ಲಿಸಬೇಕು. ಕೆರೆಗಳ ಮಾಲಿನ್ಯ ಹಾಗೂ ಒತ್ತುವರಿ ತೆರವುಗೊಳಿಸಲು ಗಮನ ಹರಿಸಬೇಕು ಎಂದು ಸಿಟಿಜನ್‌ ಆ್ಯಕ್ಷನ್‌ ಫೋರಂನ ಅಧ್ಯಕ್ಷ ಡಿ.ಎಸ್‌.ರಾಜಶೇಖರ್‌ ಹೇಳಿದ್ದಾರೆ.

ಕೆರೆಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆದರೆ, ತಳಮಟ್ಟದಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬೆಳ್ಳಂದೂರು ಕೆರೆ ಸುತ್ತಲಿನ ನಾಗರಿಕರು ಹೆಣಗಾಡುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ದೂರಿದ್ದಾರೆ.

‘ಕೆರೆಗಳ ಸ್ಥಿತಿ ಶೋಚನೀಯ’

‘ಯುನೈಟೆಡ್‌ ಬೆಂಗಳೂರು ಸಂಸ್ಥೆಯ ಜತೆಗೂಡಿ ನಗರದ 30 ಕೆರೆಗಳನ್ನು ಪರಿಶೀಲಿಸಿದ್ದೇನೆ. ಅವುಗಳ ಶೋಚನೀಯ ಸ್ಥಿತಿಯನ್ನು ಕಂಡಿದ್ದೇನೆ. ಬಹುತೇಕ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಕಸ ಹಾಗೂ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದ್ದಾರೆ.

ಕೆರೆಗಳನ್ನು ಪುನರುಜ್ಜೀವನಗೊಳಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಬೆಳ್ಳಂದೂರು ಕೆರೆ ಸೇರಿದಂತೆ ಎಲ್ಲ ಕೆರೆಗಳಿಗೆ ವೆಚ್ಚ ಮಾಡಿರುವ ವಿವರ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಎನ್‌ಜಿಟಿ ಆದೇಶವನ್ನು ಸರ್ಕಾರವು ಪಾಲಿಸಬೇಕು. ಕಾರ್ಖಾನೆಗಳಿಂದ ಬಿಡುಗಡೆ ಆಗುತ್ತಿರುವ ರಾಸಾಯನಿಕ ತ್ಯಾಜ್ಯವನ್ನು ತಡೆಗಟ್ಟಬೇಕು. ಕಳೆಯನ್ನು ತೆಗೆಸಬೇಕು. ಕಟ್ಟಡ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ರಾಜ್ಯಸಭಾ ಸದಸ್ಯರು ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರನ್ನು ದೂಷಿಸುವುದನ್ನು ನಿಲ್ಲಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.