ADVERTISEMENT

ತುರ್ತು ನೋಟಿಸ್ ಜಾರಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 20:30 IST
Last Updated 23 ಜನವರಿ 2018, 20:30 IST

ಬೆಂಗಳೂರು: ‘ಗೃಹ ಬಳಕೆ ಅನಿಲ ಎಲ್‌ಪಿಜಿ ವಿತರಕರಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಮೀಸಲು ನಿಯಮ ಪಾಲಿಸಲು ನಿರ್ದೇಶಿಸಬೇಕು’ ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ‘ಕರ್ನಾಟಕ ವಿಕಲಚೇತನರ ಸಮಿತಿ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಅಧ್ಯಕ್ಷ, ಭಾರತ್ ಪೆಟ್ರೋಲಿಯಂ ಅಧ್ಯಕ್ಷ ಮತ್ತು ಹಿಂದೂಸ್ಥಾನ್‌ ಪೆಟ್ರೋಲಿಯಂ ಅಧ್ಯಕ್ಷ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಮತ್ತು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯಗಳ ಜಂಟಿ ಕಾರ್ಯದರ್ಶಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.

ADVERTISEMENT

‘ಕರ್ನಾಟಕ ವಲಯದಲ್ಲಿ 238 ಎಲ್‌ಪಿಜಿ ವಿತರಕರ ಸ್ಥಾನಗಳ ಭರ್ತಿಗೆ ಜಾಹೀರಾತು ನೀಡಲಾಗಿದೆ. ಇದರಲ್ಲಿ ಕೇವಲ 6 ಸ್ಥಾನಗಳನ್ನು ಮಾತ್ರವೇ ಅಂಗವಿಕಲರಿಗೆ ಮೀಸಲಿಡಲಾಗಿದೆ. ಇದು ಶೇ 5ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ವಾಸ್ತವದಲ್ಲಿ 11 ಸ್ಥಾನ ಮೀಸಲಿಡಬೇಕಿತ್ತು. ಇದು ಅಂಗವಿಕಲರ ಹಕ್ಕುಗಳ ಕಾಯ್ದೆಯ ಕಲಂ 37ರ ಉಲ್ಲಂಘನೆ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.