ADVERTISEMENT

ಬೆಳ್ಳಂದೂರು ಕೆರೆ: ಮತ್ತೆ ಕಿಡಿಕಾರಿದ ಹಸಿರು ಪೀಠ

ಹೇಳಿಕೆ, ವರದಿಗೆ ಬದಲು ಕ್ರಮ ಕೈಗೊಳ್ಳಲು ಸೂಚನೆ; ಸ್ವಯಂಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:47 IST
Last Updated 24 ಜನವರಿ 2018, 19:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತಾಳಲಾಗಿದೆ ಎಂದು ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿತು.

ಬುಧವಾರ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಡಿ.ಸಾಳ್ವಿ ನೇತೃತ್ವದ ಹಸಿರು ಪೀಠವು, ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳ ರಕ್ಷಣೆಗಾಗಿ ಸಂಬಂಧಿಸಿದ ಎಲ್ಲ ಇಲಾಖೆಗಳು, ಪ್ರಾಧಿಕಾರ, ಮಂಡಳಿಗಳು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕಾರ್ಯ ಪ್ರವೃತ್ತವಾಗಬೇಕು ಎಂದು ಸೂಚಿಸಿ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು.

ಕೆರೆಯ ರಕ್ಷಣೆ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಹೈಕೋರ್ಟ್‌ ಹಾಗೂ ಹಸಿರು ಪೀಠಗಳಿಗೆ ಸಲ್ಲಿಸಲಾಗಿದೆ ಎಂದು ಸರ್ಕಾರದ ಪರ ವಕೀಲ ದೇವರಾಜ್ ಅಶೋಕ್‌ ತಿಳಿಸಿದಾಗ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಾಳ್ವಿ, ಕೆರೆಯ ರಕ್ಷಣೆಗಾಗಿ ಬರೀ ಕ್ರಿಯಾ ಯೋಜನೆ ಸಿದ್ಧಪಡಿಸಿ, ನ್ಯಾಯಾಲಯಗಳಿಗೆ ಹೇಳಿಕೆ ನೀಡಿದರೆ ಸಾಲದು. ಬದಲಿಗೆ, ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ತಾಕೀತು ಮಾಡಿದರು.

ADVERTISEMENT

ಇದುವರೆಗೆ ಬೆಳ್ಳಂದೂರು ಕೆರೆಗೆ ಐದು ಬಾರಿ ಬೆಂಕಿ ಬಿದ್ದಿದೆ. ಮೂಲ ಅರ್ಜಿದಾರರಾದ ಕುಪೇಂದ್ರ ರೆಡ್ಡಿ ಅವರು ತಿಳಿಸಿರುವಂತೆ ಕೆರೆಯಲ್ಲಿನ ನೀರಿನಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಕೆರೆಯಲ್ಲಿ ಬೆಳೆದು ಒಣಗಿರುವ ಹುಲ್ಲಿಗೆ ಬೆಂಕಿ ಹತ್ತಿರುವುದು ಕಂಡುಬಂದಿದೆ ಎಂದು ಸರ್ಕಾರದ ಪರ ವಕೀಲರು ಪೀಠಕ್ಕೆ ಮನವರಿಕೆ ಮಾಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮೂಲ ಅರ್ಜಿದಾರರ ಪರ ವಕೀಲ ಪಿ.ರಾಮಪ್ರಸಾದ್‌, ಈ ಹಿಂದೆ ಹೈಕೋರ್ಟ್‌ ಹಾಗೂ ಹಸಿರು ಪೀಠದ ಸೂಚನೆಯ ಮೇರೆಗೆ ವಿಶೇಷ ಅಧಿಕಾರಿಗಳ ನೇತೃತ್ವದ ತಂಡವು ಪರಿಶೀಲನೆ ನಡೆಸಿ ವರದಿ ಸಲ್ಲಿಸಿ, ಕೆರೆಯ ರಕ್ಷಣೆಗಾಗಿ ಕೆಲವು ಸಲಹೆಗಳ ಸಮೇತ ಶಿಫಾರಸು ಮಾಡಿದೆ. ಆದರೆ, ವರದಿಯಲ್ಲಿ ತಿಳಿಸಿರುವಂತೆ ಕೆರೆಗೆ ಬೇಲಿ ಅಳವಡಿಕೆ ಹಾಗೂ ಸಿ.ಸಿ. ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿಲ್ಲ ಎಂದು ದೂರಿದರು.

ಸರ್ಕಾರ ತಿಳಿಸಿರುವಂತೆ ಕೆರೆಯಲ್ಲಿನ ಹುಲ್ಲಿಗೆ ಮಾತ್ರ ಬೆಂಕಿ ಬಿದ್ದಿಲ್ಲ. ಕೆರೆಯ ನೀರಿನಲ್ಲಿ ರಾಸಾಯನಿಕ ಪ್ರತಿಕ್ರಿಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಇದು ಪರಿಸರಕ್ಕೆ ಸಾಕಷ್ಟು ಹಾನಿ ಉಂಟು ಮಾಡುವುದಲ್ಲದೆ, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಿವರಿಸಿದ ಅವರು, ಹಸಿರು ಪೀಠವು ಕೂಡಲೇ ವಿಶೇಷ ಅಧಿಕಾರಿಗಳನ್ನು ನೇಮಿಸಿ ಮತ್ತೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಬೇಕು ಎಂದು ಕೋರಿದರು.

ವಿದೇಶ ಪ್ರವಾಸದಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಬದಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ರಾಕೇಶ್‌ ಸಿಂಗ್‌ ವಿಚಾರಣೆಗೆ ಹಾಜರಾದರು.

ಬೆಳ್ಳಂದೂರು ಕೆರೆಯಲ್ಲಿ ಇತ್ತೀಚೆಗಷ್ಟೇ ಮತ್ತೆ ಬೆಂಕಿ ಕಾಣಿಸಿಕೊಂಡ ಕಾರಣ ಹಸಿರು ಪೀಠವು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.