ADVERTISEMENT

‘ನಮ್ಮ ಮೆಟ್ರೊ’ ಸೇವೆ ಅಬಾಧಿತ

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 19:49 IST
Last Updated 25 ಜನವರಿ 2018, 19:49 IST
‘ನಮ್ಮ ಮೆಟ್ರೊ’ ಸೇವೆ ಅಬಾಧಿತ
‘ನಮ್ಮ ಮೆಟ್ರೊ’ ಸೇವೆ ಅಬಾಧಿತ   

ಬೆಂಗಳೂರು: ಬಂದ್‌ ಇದ್ದರೂ ನಗರದಲ್ಲಿ ‘ನಮ್ಮ ಮೆಟ್ರೊ’ ರೈಲುಗಳು ಗುರುವಾರ ಎಂದಿನಂತೆಯೇ ಸಂಚರಿಸಿದವು. ಬಿಎಂಟಿಸಿ ಬಸ್‌ ಸಂಚಾರ ಇಲ್ಲದೇ ಕಷ್ಟ ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ಮೆಟ್ರೊ ತಕ್ಕಮಟ್ಟಿಗೆ ನೆರವಾಯಿತು.

ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದರಿಂದ ನಿಗಮವು ಪ್ರತಿ ಗಂಟೆಗೆ ಸಂಚರಿಸುವ ರೈಲುಗಳ ಸಂಖ್ಯೆಯನ್ನೂ ಕಡಿಮೆ ಮಾಡಿತು. ಪ್ರತಿ 10 ನಿಮಿಷಕ್ಕೊಂದು ರೈಲುಗಳು ಸಂಚರಿಸಿದವು. ದಟ್ಟಣೆ ತುಸು ಹೆಚ್ಚಾದ ಕಾರಣ ಸಂಜೆ 6 ಗಂಟೆ ಬಳಿಕ ನಿಗಮವು ಪ್ರತಿ 6 ನಿಮಿಷಕ್ಕೊಂದು ರೈಲು ಸೇವೆ ಒದಗಿಸಿತು.

ಜ. 18ರಂದು ಸಂಜೆ 6 ಗಂಟೆವರೆಗೆ 2.47 ಲಕ್ಷ ಮಂದಿ ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ಬಂದ್‌ ಕಾರಣ ಈ ಬುಧವಾರ ಸಂಜೆ 6ರವರೆಗೆ ಕೇವಲ 1.23 ಲಕ್ಷ ಮಂದಿ ಮೆಟ್ರೊ ಬಳಸಿದರು.

ADVERTISEMENT

ವಿಶೇಷ ಭದ್ರತೆ: ಈ ಹಿಂದೆ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧ ಭುಗಿಲೆದ್ದಿದ್ದ ಗಲಾಟೆ ವೇಳೆ ಕೆಲವು ದುಷ್ಕರ್ಮಿಗಳು ಮೆಟ್ರೊ ನಿಲ್ದಾಣಗಳಿಗೆ ನುಗ್ಗಿ ದಾಂದಲೆ ನಡೆಸಿದ್ದರು. ಇಂತಹ ‍ಪ್ರಕರಣ ಮರುಕಳಿಸಬಾರದು ಎಂಬ ಉದ್ದೇಶದಿಂದ ಮೆಟ್ರೊ ನಿಲ್ದಾಣಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿತ್ತು.

ಬಲವಂತದಿಂದ ಬಾಗಿಲು ಮುಚ್ಚಿಸಿದರು: ಕನ್ನಡ ಸಂಘಟನೆಗಳ ಒಕ್ಕೂಟದವರು ಬೆಳಿಗ್ಗೆ 8 ಗಂಟೆ ಹೊತ್ತಿಗೆ ಮೆಜೆಸ್ಟಿಕ್‌ ನಿಲ್ದಾಣದ ಬಳಿ ಬಂದು ಮೆಟ್ರೊ ಸೇವೆ ಸ್ಥಗಿತಗೊಳಿಸುವಂತೆ ಬಲವಂತ ಮಾಡಿದರು. ಅವರ ಒತ್ತಾಯಕ್ಕೆ ಮಣಿದು ನಿಲ್ದಾಣದ ಸಿಬ್ಬಂದಿ ನಿಲ್ದಾಣದ ಬಾಗಿಲು ಹಾಕಿದರು. ಅಷ್ಟರಲ್ಲೇ  ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಿ ಪ್ರತಿಭಟನಾಕಾರರನ್ನು ಆಚೆಗೆ ಕಳುಹಿಸಲಾಯಿತು ಎಂದು ನಿಲ್ದಾಣದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಚ್ಚಿದ ದ್ವಾರ– ಪ್ರಯಾಣಿಕರಿಗೆ ಗೊಂದಲ: ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ಭದ್ರತೆಯ ದೃಷ್ಟಿಯಿಂದ ಒಂದೆರಡು ಪ್ರವೇಶ ದ್ವಾರಗಳನ್ನು ಮಾತ್ರ ತೆರೆದು ಅಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿಲ್ದಾಣದ ಕೆಲವು ಪ್ರವೇಶ ದ್ವಾರಗಳಲ್ಲಿ ಬಾಗಿಲು ಮುಚ್ಚಿರುವುದನ್ನು ಕಂಡ
ಕೆಲ ಪ್ರಯಾಣಿಕರು, ಮೆಟ್ರೊ ಸೇವೆ ರದ್ದಾಗಿದೆ ಎಂದು ಭಾವಿಸಿ ಹಿಂದಕ್ಕೆ ತೆರಳಿದರು.

ಒಂದೇ ದಿನ 4.11 ಲಕ್ಷ ಮಂದಿ ಬಳಕೆ
ಬುಧವಾರ ಒಂದೇ ದಿನ 4.11 ಲಕ್ಷ ಮಂದಿ ‘ನಮ್ಮ ಮೆಟ್ರೊ’ ರೈಲು ಬಳಸಿದ್ದಾರೆ. ಬೆಂಗಳೂರು ಮೆಟ್ರೊ ರೈಲು ನಿಗಮದ ಪಾಲಿಗೆ ಇದೊಂದು ದಾಖಲೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ 30ರಂದು 4.10 ಲಕ್ಷ ಮಂದಿ ಬಳಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಬುಧವಾರ ರಾತ್ರಿ ವೇಳೆ ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ದಿಢೀರ್‌ ಹೆಚ್ಚಾಯಿತು. ಒಟ್ಟಿಗೆ ನಾಲ್ಕು ದಿನ ರಜೆ ಸಿಗುವ ಕಾರಣ ಬುಧವಾರವೇ ಊರಿಗೆ ತೆರಳಿದರು. ಹೆಚ್ಚಿನ ಪ್ರಯಾಣಿಕರು ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಇಳಿದಿದ್ದಾರೆ ಎಂದು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.