ADVERTISEMENT

5.5 ಲಕ್ಷ ಸೆಟ್‌ಟಾಪ್‌ ಬಾಕ್ಸ್‌ ಕಳಪೆ!

‘ಬಿಐಎಸ್‌’ ಗುರುತು ಇಲ್ಲದ ಸಾಧನ ವಿತರಣೆ * 'ಸಿಟಿ ನೆಟ್‌ವರ್ಕ್ಸ್‌ ಕಂಪನಿ' ವಿರುದ್ಧ ಎಫ್‌ಐಆರ್‌

ಸಂತೋಷ ಜಿಗಳಿಕೊಪ್ಪ
Published 6 ಮಾರ್ಚ್ 2018, 20:24 IST
Last Updated 6 ಮಾರ್ಚ್ 2018, 20:24 IST
ಸೆಟ್‌ಟಾಪ್ ಬಾಕ್ಸ್‌
ಸೆಟ್‌ಟಾಪ್ ಬಾಕ್ಸ್‌   

ಬೆಂಗಳೂರು: ‘ಡೈರೆಕ್ಟ್‌ ಟು ಹೋಮ್‌’ (ಡಿಟಿಎಚ್‌) ಮಾದರಿಯಲ್ಲೇ ಕೇಬಲ್‌ ಆಪರೇಟರ್‌ಗಳ ಮೂಲಕ ರಾಜ್ಯದ ಗ್ರಾಹಕರಿಗೆ ವಿತರಿಸಲಾಗಿದ್ದ 5.5 ಲಕ್ಷ ಸೆಟ್‌ಟಾಪ್‌ ಬಾಕ್ಸ್‌ಗಳು ಕಳಪೆಯಾಗಿವೆ! ಈ ಸಂಬಂಧ ‘ರಾಜ್ಯ ಡಿಜಿಟಲ್ ಕೇಬಲ್‌ ಆಪರೇಟರ್ಸ್ ಕ್ಷೇಮಾಭಿವೃದ್ಧಿ ಸಂಘ’ದ ಅಧ್ಯಕ್ಷ ಎಂ.ಕೆ.ಮಲ್ಲರಾಜೇ ಅರಸ್‌ ಅವರು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

‘ಸಿಟಿ ನೆಟ್‌ವರ್ಕ್ಸ್‌ ಕಂಪನಿಯು ಕಳಪೆ ಸೆಟ್‌ಟಾಪ್‌ ಬಾಕ್ಸ್‌ಗಳನ್ನು ಒದಗಿಸಿದೆ. ಅದನ್ನು ಖರೀದಿಸಿರುವ ಗ್ರಾಹಕರು ಕೇಬಲ್‌ ಆಪರೇಟರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಕಂಪನಿಯ ಕಾರ್ಯನಿರ್ವಾಹಕಅಧಿಕಾರಿ ಅಲೋಕ್‌ ಗೊವಿಲ್, ಉಪಾಧ್ಯಕ್ಷ ಯಶ್‌ ಚಂದ್ರ, ಲೆಕ್ಕ ವಿಭಾಗದ ಸಬಿನ್ ಬಾಲನ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

‘ಕೇಬಲ್‌ ಆಪರೇಟರ್‌ಗಳು ಗ್ರಾಹಕರಿಗೆ ವಿತರಿಸಿದ್ದ ಸೆಟ್‌ಟಾಪ್‌ ಬಾಕ್ಸ್‌ಗಳನ್ನು ಪರಿಶೀಲಿಸಿದ್ದೇವೆ. ನಿಯಮ ಪ್ರಕಾರ, ಬಾಕ್ಸ್‌ಗಳ ಮೇಲೆ ಬಿಐಎಸ್‌ ಗುರುತು ಇರಬೇಕು. ಆದರೆ, ಅವುಗಳಲ್ಲಿ ಅಂಥ ಯಾವುದೇ ಗುರುತು ಇಲ್ಲ. ಇವುಗಳು ಕಳಪೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ಬಳಿಕ ನಿಖರ ಮಾಹಿತಿ ತಿಳಿಯಲಿದೆ’ ಎಂದು ಪೊಲೀಸರು ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಎಂ.ಕೆ.ಮಲ್ಲರಾಜೇ ಅರಸ್, ‘ಸೆಟ್‌ಟಾಪ್‌ ಬಾಕ್ಸ್‌ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಸರ್ಕಾರವೇ ಆದೇಶ ಹೊರಡಿಸಿದೆ. ಇವುಗಳ ಖರೀದಿಗೆ ಸಿಟಿ ನೆಟ್‌ವರ್ಕ್ಸ್‌ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದೆವು. ಕಂಪನಿಯವರಿಂದ ಪಡೆದ ಬಾಕ್ಸ್‌ಗಳನ್ನು ಗ್ರಾಹಕರಿಗೆ ವಿತರಿಸಿದ್ದೇವೆ. ಬೆಂಗಳೂರಿನಲ್ಲೇ 3.5 ಲಕ್ಷ ಬಾಕ್ಸ್‌ಗಳನ್ನು ನೀಡಲಾಗಿದೆ’ ಎಂದರು.

‘ಇವು ಚೀನಾ ನಿರ್ಮಿತ ಬಾಕ್ಸ್‌ಗಳು ಎಂದು ತಿಳಿದುಬಂದಿದೆ. ದೇಶದ ಯಾವುದೇ ಸಂಸ್ಥೆಯು ಇವುಗಳ ಪರೀಕ್ಷೆ ಮಾಡಿಲ್ಲ. ಕಂಪನಿಯವರು ನೇರವಾಗಿ ನಮ್ಮ (ಕೇಬಲ್‌ ಆಪರೇಟರ್‌) ಮೂಲಕ ಗ್ರಾಹಕರಿಗೆ ಬಾಕ್ಸ್‌ ನೀಡಿದ್ದಾರೆ. ಪ್ರತಿ ಬಾಕ್ಸ್‌ಗೆ ₹1,500 ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದರು.

‘ಈ ಸಾಧನ ವಾಹಿನಿಗಳ ಸಂಕೇತಗಳನ್ನು ಸರಿಯಾಗಿ ಗ್ರಹಿಸುತ್ತಿಲ್ಲ. ಟಿ.ವಿಯಲ್ಲಿ ಕಾಣಿಸುವ ಚಿತ್ರದ ಗುಣಮಟ್ಟವೂ ಕಳಪೆಯಾಗಿದೆ. 32 ಇಂಚಿಗಿಂತ ದೊಡ್ಡ ಗಾತ್ರದ ಟಿ.ವಿಗಳಲ್ಲಿ ದೃಶ್ಯಗಳು ಅಸ್ಪಷ್ಟವಾಗಿ ಮೂಡುತ್ತವೆ. ಧ್ವನಿಯೂ ಸಮರ್ಪಕವಾಗಿಲ್ಲ.ಈ ಕುರಿತು ಗ್ರಾಹಕರಿಂದ ನಿತ್ಯವೂ ದೂರುಗಳು ಬರುತ್ತಿವೆ. ಬಾಕ್ಸ್‌ಗಳೇ ಕಳಪೆ ಆಗಿರುವುದರಿಂದ, ಸಮಸ್ಯೆಗಳನ್ನು ನಿವಾರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಿಟಿ ನೆಟ್‌ವರ್ಕ್ಸ್‌ ಕಂಪನಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದೂರು ದಾಖಲಿಸಿದ್ದೇವೆ’ ಎಂದರು.

‘ಕಂಪನಿಯ ಪದಾಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಕೇಬಲ್‌ ಆಪರೇಟರ್‌ ಪರವಾನಗಿ ಪಡೆದುಕೊಂಡಿದ್ದೇವೆ. ವಾಹಿನಿಗಳು ಸರಿ ಬರುತ್ತಿಲ್ಲ ಎಂಬ ಕಾರಣಕ್ಕೆ ಗ್ರಾಹಕರು ಮಾಸಿಕ ಶುಲ್ಕವನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕಂಪನಿ ನಮಗೆ ನಂಬಿಕೆ ದ್ರೋಹ ಮಾಡಿದೆ’ ಎಂದು ತಿಳಿಸಿದರು.

₹20 ಕೋಟಿ ವಂಚನೆ: ‘ಕಂಪನಿಯು ಸೋನಿ ವಾಹಿನಿಯ ಹೆಸರಿನಲ್ಲಿ ₹20 ಕೋಟಿ ಪಡೆದು ನಮ್ಮನ್ನು ವಂಚಿಸಿದೆ’ ಎಂದು ಅರಸ್ ಆರೋಪಿಸಿದರು. ಈ ಅಂಶವನ್ನೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಶುಲ್ಕ ಪಾವತಿಸಿ ವೀಕ್ಷಿಸಬಹುದಾದ ವಾಹಿನಿಗಳಿಗೆ ಮಾಸಿಕ ಶುಲ್ಕ ಪಾವತಿಸಬೇಕೆಂದು ಕಂಪನಿಯವರು ನಮ್ಮಿಂದ ₹40 ಕೋಟಿ ಸಂಗ್ರಹಿಸಿದ್ದಾರೆ. ಅದರಲ್ಲಿ ₹20 ಕೋಟಿಯನ್ನಷ್ಟೇ ವಾಹಿನಿಗೆ ಕಟ್ಟಿದ್ದಾರೆ. ಅದೇ ಕಾರಣಕ್ಕೆ ರಾಜ್ಯದ ಸಿಟಿ ಕೇಬಲ್‌ನಲ್ಲಿ ಸೋನಿ ವಾಹಿನಿಯ ಪ್ರಸಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದರು.

‘ಮೂರು ವರ್ಷಗಳಿಂದ ಇದೇ ರೀತಿ ವಂಚನೆ ಆಗುತ್ತಿದೆ. ಆ ಬಗ್ಗೆ ಪ್ರಶ್ನಿಸಲು ಕಂಪನಿಯ ಕಚೇರಿಗೆ ಹೋದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿದ್ದಾರೆ. ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ’ ಎಂದು ಆರೋಪಿಸಿದರು.

ತಲೆಮರೆಸಿಕೊಂಡ ಕಂಪನಿ ಸಿಬ್ಬಂದಿ
‘ಸಿಟಿ ನೆಟ್‌ವರ್ಕ್ಸ್‌ ಕಂಪನಿಯ ಮುಖ್ಯ ಕಚೇರಿ ದೆಹಲಿಯಲ್ಲಿದೆ. ನಗರದಲ್ಲಿರುವ ಕಂಪನಿಯ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಕೆಲವರು ತಲೆಮರೆಸಿಕೊಂಡಿದ್ದಾರೆ. ಸಿಇಒ ಅಲೋಕ್‌ ಗೊವಿಲ್ ದೆಹಲಿಯಲ್ಲಿರುವ ಮಾಹಿತಿ ಇದೆ. ಅವರನ್ನು ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಅಂಕಿ–ಅಂಶ
850–ರಾಜ್ಯದಲ್ಲಿರುವ ‘ಸಿಟಿ ಕೇಬಲ್’ ಆಪರೇಟರ್‌ಗಳ ಸಂಖ್ಯೆ
350–ಬೆಂಗಳೂರಿನಲ್ಲಿರುವ ಆಪರೇಟರ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.