ADVERTISEMENT

ಸಮಾಜವಾದ ಕಡೆಗೆ ಯುವಪೀಳಿಗೆ

ಕಾರ್ಯಾಗಾರದಲ್ಲಿ ಫ್ರೆಂಚ್‌ ಸಮಾಜವಾದಿ ಸೆಬಾಸ್ಟಿಯನ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 18:49 IST
Last Updated 27 ಜನವರಿ 2018, 18:49 IST
ಸೆಬಾಸ್ಟಿಯನ್ ಬರ್ಗರ್ ಮಾತನಾಡಿದರು. (ಎಡದಿಂದ) ಕೆ.ಎಲ್.ಅಶೋಕ್,  ಪ್ರೊ.ಸಂಜಯ್ ಕುಮಾರ್ ಇದ್ದಾರೆ.–ಪ್ರಜಾವಾಣಿ ಚಿತ್ರ
ಸೆಬಾಸ್ಟಿಯನ್ ಬರ್ಗರ್ ಮಾತನಾಡಿದರು. (ಎಡದಿಂದ) ಕೆ.ಎಲ್.ಅಶೋಕ್, ಪ್ರೊ.ಸಂಜಯ್ ಕುಮಾರ್ ಇದ್ದಾರೆ.–ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಮೆರಿಕ ಮತ್ತು ಯುರೋಪ್‌ನಲ್ಲೂ ನವಪೀಳಿಗೆಯ ಯುವಜನತೆ ಸಮಾಜವಾದದ ಕಡೆಗೆ ಮರಳುತ್ತಿದ್ದಾರೆ ಎಂದು ಫ್ರೆಂಚ್‌ ಸಮಾಜವಾದಿ ಸೆಬಾಸ್ಟಿಯನ್‌ ಬರ್ಗರ್‌ ತಿಳಿಸಿದರು.

ಜನಚಿಂತನ ಕೇಂದ್ರ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತ ಸಂದರ್ಭದಲ್ಲಿ ಫ್ಯಾಸಿಸಂ: ಅರ್ಥಮಾಡಿಕೊಳ್ಳುವ ಹಾಗೂ ಪ್ರತಿರೋಧಿಸುವ ಬಗೆ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಯುವಕರಿಗೆ ಆಧುನಿಕ ಯುಗಕ್ಕೆ ಮತ್ತು ಸಮಕಾಲೀನ ಪರಿಸ್ಥಿತಿಗೆ ಬೇಕಾದ ಸಮಾಜವಾದದ ಪರಿಕಲ್ಪನೆ ಪರಿಚಯಿಸಬೇಕಾಗಿದೆ ಎಂದರು.

ADVERTISEMENT

ಭಾರತವೂ ಬದಲಾವಣೆ ಬಯಸುವ ಯುವ ಜನತೆಯನ್ನು ಹೊಂದಿದೆ. ಆದರೆ, ನರೇಂದ್ರ ಮೋದಿಯವರು ಆ ಯುವಜನರನ್ನು ಆಕರ್ಷಿಸಿ ಹಿಡಿದಿಟ್ಟುಕೊಂಡಿದ್ದಾರೆ ಎಂಬುದು ನಿಜ ಕೂಡ. ತೀವ್ರಗಾಮಿತನದತ್ತ ಹೊರಳದಂತೆ ಯುವಪಡೆಗೆ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದರು.

ದೆಹಲಿಯ ಸಂತ ಸ್ಟೀಫನ್‌ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಸಂಜಯ್‌ ಕುಮಾರ್‌, ‘ಅಲ್ಪಸಂಖ್ಯಾತ, ವೈಚಾರಿಕ ಹಾಗೂ ಇತರ ಜನಸಾಮಾನ್ಯ ಚಳವಳಿಗೆ ನಡುವೆ ಏಕತೆ ಬರಬೇಕಿದೆ. ಇದಕ್ಕೆ ಪರಸ್ಪರ ಸಹಕಾರದ ಅಗತ್ಯವೂ ಇದೆ’ ಎಂದರು.

ಇಂದಿನ ಯುವಜನತೆ 80ರ ದಶಕದ ಯುವಜನರಂತಿಲ್ಲ. ನವ ಉದಾರವಾದಿಗಳಾಗಿದ್ದಾರೆ. ಇಂದಿನ ಆರ್ಥಿಕ ಸ್ಥಿತಿ ಕೂಡ ಭಿನ್ನವಾಗಿದೆ. ನಾಗರಿಕತೆಯ ವ್ಯಾಖ್ಯಾನ ಕೂಡ ಬದಲಿಸಿಕೊಳ್ಳಬೇಕಾಗಿದೆ ಎಂದರು.

ಪ್ರೊ.ಅರುಣ್‌ಕುಮಾರ್, ‘ಫ್ಯಾಸಿಸಂ ಎಂದಾಕ್ಷಣ ಎಲ್ಲರೂ ಇಟಲಿ ನೆನಪಿಸಿಕೊಳ್ಳುತ್ತಾರೆ. ಆದರೆ, ಇದಕ್ಕೆ ಮೂಲ ಪ್ರೇರಣೆಯಾದ ಅಮೆರಿಕದಲ್ಲಿ ರೆಡ್‌ ಇಂಡಿಯನ್ನರನ್ನು ಹೊಸಕಿಹಾಕಿದ ಬೆಳವಣಿಗೆಯನ್ನು ಎಲ್ಲರೂ ಮರೆಯುತ್ತಾರೆ. ವಿಶ್ವಕ್ಕೆ ಫ್ಯಾಸಿಸಂ ಹೊಸತಲ್ಲ. ಆದರೆ, ಟ್ರಂಪ್‌ ಮತ್ತು ಮೋದಿ ಅವರ ಹೇಳಿಕೆ ಗಮನಿಸಿದರೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಹೊಸಬಗೆಯ ಫ್ಯಾಸಿಸಂ ಹರಡುತ್ತಿದೆ ಮತ್ತು ಅದನ್ನು ಸಮೂಹ ಚಳವಳಿಯಂತೆ ಬೆಳೆಸುವ ಕೆಲಸಗಳು ನಡೆಯುತ್ತಿವೆ ಎಂದರು.

‘ಎಲ್ಲರೂ ಮೋದಿ ಅವರನ್ನು ಟ್ರಂಪ್‌ಗೆ ಹೋಲಿಸುತ್ತಿದ್ದಾರೆ. ಆದರೆ, ಅವರನ್ನು ರೊನಾಲ್ಡ್‌ ರೇಗನ್‌ಗೆ ಹೋಲಿಸುವುದೇ ಸೂಕ್ತ. ಬಿಜೆಪಿ ಮತ್ತು ಅಮೆರಿಕದ ರಿಪಬ್ಲಿಕನ್‌ ಪಾರ್ಟಿ ನಡುವೆ ಬಹಳ ಸಾಮ್ಯತೆ ಇದೆ’ ಎಂದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಎಲ್‌.ಅಶೋಕ್, ‘ಸಂಘಪರಿವಾರದ ಸುಳ್ಳಿನ ಕಾರ್ಖಾನೆಯಲ್ಲಿ ತಯಾರಾಗುತ್ತಿರುವ ದ್ವೇಷ ಬಿತ್ತುವ, ಸುಳ್ಳು ಸೃಷ್ಟಿಸುವ ಅಪಾಯಕಾರಿ ಸರಕಿಗೆ ಯುವಜನರು ಆಕರ್ಷಿತರಾಗದಂತೆ ತಡೆಯಬೇಕಿದೆ’ ಎಂದು ತಿಳಿಸಿದರು.

‘ಈಗಾಗಲೇ ದೇಶಕ್ಕೆ ಫ್ಯಾಸಿಸಂ ಕಾಲಿಟ್ಟಾಗಿದೆ. ಸಂಘಪರಿವಾರ ಫ್ಯಾಸಿಸಂ ಅನ್ನು ದಕ್ಷಿಣ ಭಾರತಕ್ಕೆ ಹರಡಲು ಹವಣಿಸುತ್ತಿದೆ. ಫ್ಯಾಸಿಸಂ ಹರಡುವ ಯಾವುದೇ ಪ್ರಭುತ್ವಕ್ಕೆ ರಾಜಾಶ್ರಯ ಸಿಗಬಾರದು. ಇದು ಇಂದಿನ ತುರ್ತು ಕೂಡ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.