ADVERTISEMENT

ಇಲ್ಲೊಂದು ಪೌರಾಣಿಕ ಮಾದರಿಯ ಕಲ್ಯಾಣ!

ಶಿವ ಮತ್ತು ಪಾರ್ವತಿಯ ವೇಷ ಧರಿಸಿದ ವಧು–ವರರು l ದೇವಾನುದೇವತೆಗಳ ವೇಷದಲ್ಲಿ ಪೋಷಕರು

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ಗಿರಿಜಾ ಕಲ್ಯಾಣ ಮಾದರಿಯಲ್ಲಿ ಲಕ್ಷ್ಮೀನಾರಾಯಣ ಮತ್ತು ಕುಸುಮಾ ವಿವಾಹ
ಗಿರಿಜಾ ಕಲ್ಯಾಣ ಮಾದರಿಯಲ್ಲಿ ಲಕ್ಷ್ಮೀನಾರಾಯಣ ಮತ್ತು ಕುಸುಮಾ ವಿವಾಹ   

ಆನೇಕಲ್‌ : ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂಬ ಮಾತಿದೆ. ಮದುವೆಗಳನ್ನು ಮಾಡಿಕೊಳ್ಳುವುದರಲ್ಲೂ ಹಲವಾರು ಮಂದಿ ವಿವಿಧ ವಿಶೇಷತೆಗಳನ್ನು ಮೆರೆದಿದ್ದಾರೆ. ಕೆಲವರು ಸಮುದ್ರದ ಮೇಲೆ ಮದುವೆ ಮಾಡಿಕೊಂಡರೆ, ಇನ್ನೂ ಕೆಲವರು ಸರಳ ವಿವಾಹ ಮಾಡಿಕೊಳ್ಳು
ತ್ತಾರೆ. ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ವಿವಾಹವೊಂದು ‘ಗಿರಿಜಾ ಕಲ್ಯಾಣ’ದ ಮಾದರಿಯಲ್ಲಿ ಪೌರಾಣಿಕವಾಗಿ ನಡೆಯುವ ಮೂಲಕ ಜನರನ್ನು ಸೆಳೆಯಿತು.

‘ಗಿರಿಜಾ ಕಲ್ಯಾಣ’ ಸಿನಿಮಾ ಹಾಗೂ ‘ಹರ ಹರ ಮಹಾದೇವ್’ ಧಾರಾವಾಹಿಯಿಂದ ಪ್ರೇರೇಪಿತರಾಗಿ ಈ ವಿವಾಹ ನಡೆದಿದೆ. ಪೌರಾಣಿಕವಾಗಿ ಮದುವೆ ಮಾಡಿಕೊಳ್ಳಬೇಕೆಂಬ ಹಂಬಲದಿಂದ ವಧು ವರರ ಪೋಷಕರು ದೇವಾನುದೇವತೆಗಳ ಪೋಷಾಕು ಧರಿಸಿದ್ದರು. ವರ
ಮತ್ತು ವಧು ಶಿವ ಮತ್ತು ಪಾರ್ವತಿಯ ವೇಷ ಧರಿಸಿ ವಿವಾಹವಾದರು.

ಬನ್ನೇರುಘಟ್ಟ ಸಮೀಪದ ವೀವರ್ಸ್‌ ಕಾಲೊನಿಯ ಪದ್ಮಾವತಿ ಮತ್ತು ವಸಂತ್‌ ಕುಮಾರ್ ಅವರು ಮಗ ಲಕ್ಷ್ಮೀ
ನಾರಾಯಣನ ಮದುವೆಯನ್ನು ಗಿರಿಜಾ ಕಲ್ಯಾಣದಂತೆ ನಡೆಸಬೇಕೆಂದು ತೀರ್ಮಾನ ಕೈಗೊಂಡರು. ಅರ್ಚಕ ವೃತ್ತಿ ನಡೆಸುತ್ತಿದ್ದ ಅವರು ನಿತ್ಯ ದೇವರ ಪೂಜೆ ನಡೆಸುತ್ತಿದ್ದರು.

ADVERTISEMENT

ಲಕ್ಷ್ಮೀನಾರಾಯಣ್‌ಗೆ ಯಲಹಂಕದ ಕುಸುಮಾ ಅವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಬೀಗರೊಂದಿಗೆ ಸಮಾಲೋಚನೆ ನಡೆಸಿ ಗಿರಿಜಾ ಕಲ್ಯಾಣದ ಮಾದರಿಯಲ್ಲಿ ವಿವಾಹ ನಡೆಸಲು ಮಾತುಕತೆ ನಡೆಸಿದ್ದರು. ಜನರು ಮದುವೆಗೆ ಬಂದಾಗ ಅದು ಮದುವೆ ಮಂಟಪವೋ ಅಥವಾ ಪೌರಾಣಿಕ ನಾಟಕವೋ ಎಂಬ ಅನುಮಾನ ಬಂದಿತ್ತು.ಮದುಮಗಳ ತಂದೆ ತಾಯಿ ಹಾಗೂ ಸಂಬಂಧಿಕರು ಬ್ರಹ್ಮ, ಸರಸ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ಸಪ್ತ ಋಷಿಗಳಂತೆ ಸಿಂಗರಿಸಿಕೊಂಡು ಮದುವೆಯ ಕಲ್ಯಾಣ ಮಂಟಪಕ್ಕೆ ಬಂದರು. ಬಂಧುಗಳು ಈ ಮದುವೆ ಕಂಡು ಸಂತಸ ಪಟ್ಟರು. ಕೈಲಾಸವೇ ಧರೆಗಿಳಿದಂತೆ ಕಲ್ಯಾಣ ಮಂಟಪದಲ್ಲಿ ಋಷಿಗಳು, ನಂದಿ ವೇಷಧಾರಿಗಳಿದ್ದರು. ಹಿರಿಯ ಮಹಿಳೆಯರೂ ಪೌರಾಣಿಕ ಉಡುಗೆ ತೊಡುಗೆಗಳಲ್ಲಿ ಕಂಡುಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.