ADVERTISEMENT

ಎಟಿಎಂಗೆ ತುಂಬಬೇಕಿದ್ದ ₹90 ಲಕ್ಷ ಹೊತ್ತೊಯ್ದರು

ಸಿಎಂಎಸ್ ಏಜೆನ್ಸಿ ನೌಕರರಿಂದಲೇ ಕೃತ್ಯ: ಕಿತ್ತನಹಳ್ಳಿ ಅರಣ್ಯಪ್ರದೇಶದಲ್ಲಿ ವಾಹನ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:40 IST
Last Updated 30 ಜನವರಿ 2018, 19:40 IST
ಕಿತ್ತನಹಳ್ಳಿ ಅರಣ್ಯದಲ್ಲಿ ಪತ್ತೆಯಾದ ಹಣ ಸಾಗಣೆ ವಾಹನ (ಒಳಚಿತ್ರದಲ್ಲಿ ನಾರಾಯಣಸ್ವಾಮಿ, ನರಸಿಂಹರಾಜು)
ಕಿತ್ತನಹಳ್ಳಿ ಅರಣ್ಯದಲ್ಲಿ ಪತ್ತೆಯಾದ ಹಣ ಸಾಗಣೆ ವಾಹನ (ಒಳಚಿತ್ರದಲ್ಲಿ ನಾರಾಯಣಸ್ವಾಮಿ, ನರಸಿಂಹರಾಜು)   

ಬೆಂಗಳೂರು: ಸಿಎಂಎಸ್ ಸರ್ವಿಸ್ ಏಜೆನ್ಸಿಯ ನೌಕರರಿಬ್ಬರು ಎಟಿಎಂ ಯಂತ್ರಗಳಿಗೆ ತುಂಬಬೇಕಿದ್ದ ₹90 ಲಕ್ಷದೊಂದಿಗೆ ಪರಾರಿಯಾಗಿದ್ದಾರೆ.

ಹಣ ಹೊತ್ತೊಯ್ದಿರುವ ಏಜೆನ್ಸಿಯ ವಾಹನ ಚಾಲಕ ನಾರಾಯಣಸ್ವಾಮಿ (45) ಹಾಗೂ ಆತನ ಸಹಾಯಕ ನರಸಿಂಹರಾಜು (28) ಪತ್ತೆಗೆ ಜ್ಞಾನಭಾರತಿ ಪೊಲೀಸರು ಬಲೆ ಬೀಸಿದ್ದಾರೆ.

ಸೋಮವಾರ ಸಂಜೆ 4.30ರ ಸುಮಾರಿಗೆ ಜ್ಞಾನಭಾರತಿ ವೃತ್ತದಿಂದ ಹಣದ ವಾಹನದ ಸಮೇತ ಪರಾರಿಯಾಗಿದ್ದ ಆರೋಪಿಗಳು, ಆ ಟಾಟಾ ಸುಮೊವನ್ನು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತನಹಳ್ಳಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ.

ADVERTISEMENT

ಸಿಎಂಎಸ್ ಏಜೆನ್ಸಿಯು ಎಚ್‌ಡಿಎಫ್‌ಸಿ, ಎಸ್‌ಬಿಐ ಹಾಗೂ ಕರ್ನಾಟಕ ಬ್ಯಾಂಕ್‌ನ ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದೆ. ರಾಜ
ಧಾನಿಯ ವಿವಿಧ ಶಾಖೆಗಳಿಂದ ಹಣ ಸಂಗ್ರಹಿಸುವ ನೌಕರರು, ಆಯಾ ವ್ಯಾಪ್ತಿಯ ಎಟಿಎಂ ಯಂತ್ರಗಳಿಗೆ ಹಣ ತುಂಬುತ್ತಾರೆ. ತುಮಕೂರು ಜಿಲ್ಲೆ ಹೆಬ್ಬೂರು ಗ್ರಾಮದ ನರಸಿಂಹರಾಜು ಹಾಗೂ ಉತ್ತರಹಳ್ಳಿಯ ನಾರಾಯಣಸ್ವಾಮಿ ಮೂರು ವರ್ಷಗಳಿಂದ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಮೇಲಾಧಿಕಾರಿಗಳ ಸೂಚನೆಯಂತೆ ಸೋಮವಾರ ಮಧ್ಯಾಹ್ನ ಗನ್‌ಮ್ಯಾನ್ ನಟರಾಜ್ (57) ಜತೆ ರಾಜರಾಜೇಶ್ವರಿನಗರಕ್ಕೆ ತೆರಳಿದ್ದ ಅವರಿಬ್ಬರೂ, ಅಲ್ಲಿನ ಮೂರು ಬ್ಯಾಂಕ್‌ಗಳಿಂದ ₹ 2.15 ಕೋಟಿ ಸಂಗ್ರಹಿಸಿದ್ದರು.

ಆ ಹಣದಲ್ಲಿ ₹ 1.25 ಕೋಟಿಯನ್ನು ಆರು ಎಟಿಎಂಗಳಿಗೆ ತುಂಬಿದ್ದ ನೌಕರರು, ಉಳಿದ ₹ 90 ಲಕ್ಷವನ್ನು ಜ್ಞಾನಭಾರತಿ ವೃತ್ತ ಹಾಗೂ ನಾಗರಬಾವಿಯ ಎಟಿಎಂ ಘಟಕಗಳಿಗೆ ತುಂಬಬೇಕಿತ್ತು.

ಸಂಜೆ 4.30ರ ಸುಮಾರಿಗೆ ಮೂವರೂ ಜ್ಞಾನಭಾರತಿ ವೃತ್ತಕ್ಕೆ ಬಂದಿದ್ದಾರೆ. ಈ ವೇಳೆ ನರಸಿಂಹರಾಜು, ಎದುರುಗಡೆ ಇರುವ ಅಂಗಡಿಗೆ ಹೋಗಿ ಬಾಳೆ ಹಣ್ಣು ತರುವಂತೆ ಗನ್‌ಮ್ಯಾನ್‌ಗೆ ಹೇಳಿದ್ದಾನೆ. ಅಂತೆಯೇ ನಟರಾಜ್ ಅಂಗಡಿಗೆ ಹೋದಾಗ ಆರೋಪಿಗಳು ವಾಹನದೊಂದಿಗೆ
ಪರಾರಿಯಾಗಿದ್ದಾರೆ.

ಸ್ವಲ್ಪ ಸಮಯದ ನಂತರ ನಟರಾಜ್‌ ಎಟಿಎಂ ಘಟಕದ ಬಳಿಕ ವಾಪಸಾಗಿದ್ದಾರೆ. ವಾಹನ ಕಾಣಿಸದಿದ್ದಾಗ, ನಾಗರಬಾವಿಯ ಎಟಿಎಂಗೆ ಹಣ ತುಂಬಿ ಬರಲು ಹೋಗಿರಬಹುದೆಂದು ಭಾವಿಸಿದ್ದಾರೆ. ಸಂಜೆ 6 ಗಂಟೆವರೆಗೆ ಕಾದರೂ ಅವರು ಬಾರದಿದ್ದಾಗ ಗಾಬರಿಗೊಂಡ ಅವರು, ಕೂಡಲೇ ಆಟೊದಲ್ಲಿ ರಾಜಾಜಿನಗರದ ಏಜೆನ್ಸಿ ಕಚೇರಿಗೆ ತೆರಳಿ ವ್ಯವಸ್ಥಾಪಕ ರಘುನಾಥ್ ಅವರಿಗೆ ವಿಷಯ ತಿಳಿಸಿದ್ದಾರೆ.

‘ರಘುನಾಥ್ ರಾತ್ರಿ 7.15ಕ್ಕೆ ದೂರು ಕೊಟ್ಟರು. ವಾಹನದ ನೋಂದಣಿ ಸಂಖ್ಯೆ (ಕೆಎ 17 9668) ಹಾಗೂ ಪ್ರಕರಣದ ವಿವರವನ್ನು ನಿಯಂತ್ರಣ ಕೊಠಡಿ ಮೂಲಕ ಎಲ್ಲ ಠಾಣೆಗಳಿಗೂ ರವಾನಿಸಿದೆವು. ಮಂಗಳವಾರ ಬೆಳಿಗ್ಗೆ 7.30ರ ಸುಮಾರಿಗೆ ಕಿತ್ತನಹಳ್ಳಿ ಅರಣ್ಯ ಪ್ರದೇಶದಲ್ಲಿ ಟಾಟಾ ಸುಮೊ ಕಂಡ ಸ್ಥಳೀಯರು, 100ಗೆ ಕರೆ ಮಾಡಿ ಹೇಳಿದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದರಲ್ಲಿ ಹಣವಿರಲಿಲ್ಲ’ ಎಂದು ಜ್ಞಾನಭಾರತಿ ಪೊಲೀಸರು ಹೇಳಿದರು.

‘ಆರೋಪಿಗಳ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದೇವೆ. ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ₹ 15 ಲಕ್ಷ ಸಾಲ ಮಾಡಿದ್ದ ನಾರಾಯಣಸ್ವಾಮಿ, ಹಣ ಹಿಂದಿರುಗಿಸಲಾಗದೆ ಒದ್ದಾಡುತ್ತಿದ್ದ. ಅದೇ ಕಾರಣಕ್ಕೆ ಸಹಾಯಕನೊಂದಿಗೆ ಸಂಚು ರೂಪಿಸಿ ಕೃತ್ಯ ಎಸಗಿರಬಹುದು. ಸದ್ಯ ಇಬ್ಬರ ಮೊಬೈಲ್‌ಗಳೂ ಸ್ವಿಚ್ಡ್‌ಆಫ್ ಆಗಿದ್ದು, ಆರೋಪಿಗಳ ಪತ್ತೆಗೆ ಬೆಂಗಳೂರು, ತುಮಕೂರು ಹಾಗೂ ಕೋಲಾರದಲ್ಲಿ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
***
ಮಗನಿಗೆ ಸುಳಿವು ಕೊಟ್ಟಿದ್ದ!

‘ಅಪ್ಪ ಸಾಲದ ಸುಳಿಯಲ್ಲಿ ಸಿಲುಕಿದ್ದರು. ನಾಲ್ಕೈದು ದಿನಗಳ ಹಿಂದೆ ಪಾನಮತ್ತರಾಗಿ ಮನೆಗೆ ಬಂದ ಅವರು, ‘ಸದ್ಯದಲ್ಲೇ ₹ 20 ಲಕ್ಷ ಸಿಗಲಿದ್ದು, ಎಲ್ಲ ಸಮಸ್ಯೆ ಬಗೆಹರಿಯುತ್ತದೆ’ ಎಂದು ಹೇಳಿದ್ದರು. ಅಮಲಿನಲ್ಲಿ ಏನೋ ಮಾತನಾಡುತ್ತಿರಬಹುದೆಂದು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ’ ಎಂದು ನಾರಾಯಣಸ್ವಾಮಿ ಮಗ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.
**
ಭದ್ರತೆಯಲ್ಲಿ ನಡೆದ ದರೋಡೆಗಳು

* 2012 ಮೇ 14: ಆರ್‌.ಟಿ.ನಗರದ ತರಳಬಾಳು ರಸ್ತೆಯಲ್ಲಿ ಸಿಎಂಎಸ್ ವಾಹನವನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ₹ 1.91 ಕೋಟಿ ದೋಚಿದ್ದರು.

* 2012 ಜುಲೈ 27: ಸಿಎಂಎಸ್ ಏಜೆನ್ಸಿಯ ವಾಹನ ಚಾಲಕ ಸಿಕಂದರ್ ಪಾಷಾ, ತನ್ನ ಸಹಚರರೊಂದಿಗೆ ಸೇರಿ ₹ 42 ಲಕ್ಷ ದರೋಡೆ ಮಾಡಿದ್ದ.

* 2015, ಡಿ.17: ಕೆ.ಎಚ್‌.ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್‌ ಎಟಿಎಂ ಘಟಕಕ್ಕೆ ಹಣ ತುಂಬಲು ತೆರಳಿದ್ದ ಸಿಎಂಎಸ್ ಏಜೆನ್ಸಿ ನೌಕರರ ಮೇಲೆ ಹಲ್ಲೆ ನಡೆಸಿ ₹ 11.5 ಲಕ್ಷ ದೋಚಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.