ADVERTISEMENT

’ಫ್ಯಾಸಿಸ್ಟ್ ಶಕ್ತಿ ಅಳಿಯಲಿ; ಸಹಬಾಳ್ವೆ ಉಳಿಯಲಿ’

ನಗರದಲ್ಲಿ ನಡೆದ ಸೌಹಾರ್ದಕ್ಕಾಗಿ ಮಾನವ ಸರಪಳಿಯಲ್ಲಿ ಚಿಂತಕರ ಒಕ್ಕೊರಲ ಧ್ವನಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:51 IST
Last Updated 30 ಜನವರಿ 2018, 19:51 IST
ವಿದ್ಯಾರ್ಥಿಗಳು ಪುರಭವನದ ಮುಂದೆ ಮಾನವ ಸರಪಳಿ ರಚಿಸಿದರು–ಪ್ರಜಾವಾಣಿ ಚಿತ್ರ
ವಿದ್ಯಾರ್ಥಿಗಳು ಪುರಭವನದ ಮುಂದೆ ಮಾನವ ಸರಪಳಿ ರಚಿಸಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶದಲ್ಲಿ ದ್ವೇಷ ಬಿತ್ತುತ್ತಿರುವ ಕೋಮುವಾದಿಶಕ್ತಿ, ಫ್ಯಾಸಿಸ್ಟ್ ಶಕ್ತಿಗಳನ್ನು ತೊಲಗಿಸಬೇಕು. ಪ್ರೀತಿ, ಶಾಂತಿ, ಸಹಬಾಳ್ವೆ, ಸೌಹಾರ್ದದ ಕೊಂಡಿ ಬೆಸೆಯಲು ಎಲ್ಲರೂ ಕೈಜೋಡಿಸಬೇಕು...

‘ಸೌಹಾರ್ದಕ್ಕಾಗಿ ಕರ್ನಾಟಕ’ ಮಂಗಳವಾರ ಆಯೋಜಿಸಿದ್ದ ‘ಸೌಹಾರ್ದಕ್ಕಾಗಿ ಮಾನವ ಸರಪಳಿ’ಯಲ್ಲಿ ಕೇಳಿ ಬಂದ ಒಕ್ಕೊರಲ ಧ್ವನಿ ಇದು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ‘ರಾಜಕಾರಣಕ್ಕಾಗಿ ಜಾತಿ, ಧರ್ಮ, ಕೋಮುಗಳ ನಡುವೆ ಸಾಮರಸ್ಯ ಕದಡುವ ಪ್ರಯತ್ನ ನಡೆಯುತ್ತಿದೆ. ಇಂದು ದೇಶ ಒಡೆದ ಗಾಜಿನ ಮನೆಯಾಗಿದೆ. ಒಡೆದ ಚೂರಿನಲ್ಲಿ ರಾಜಕಾರಣಿಗಳು ತಮ್ಮ ಮುಖ ತೋರಿಸುತ್ತಿದ್ದಾರೆ. ಇದು ನಮ್ಮ ಪರಂಪರೆಯಲ್ಲ. ದೇಶವು ಸೌಹಾರ್ದ, ಸಾಮರಸ್ಯದ ಪರಂಪರೆಯನ್ನು ಪ್ರತಿಪಾದಿಸಿದೆ’ ಎಂದರು.

ADVERTISEMENT

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ‘ದೇಶ ಇಂದು ಗಂಡಾಂತರದಲ್ಲಿದೆ. ಧರ್ಮ ನಿರಪೇಕ್ಷಿತರಾಗಿರಬೇಕಾದ ಸಚಿವರೇ ಸಂವಿಧಾನ ವಿರೋಧಿಯಾಗಿ, ಕೋಮು ಪ್ರಚೋದನೆ ನೀಡುತ್ತಿದ್ದಾರೆ. ಜನರ ದಿಕ್ಕು ತಪ್ಪಿಸಿ, ನಿಜವಾದ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ. ಕೋಮುಗಲಭೆ ಮೂಲಕ ರಾಜಕೀಯ ಮಾಡಲು ಅವಕಾಶ ನೀಡಬಾರದು’ ಎಂದರು.

ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಕೆ.ಮರುಳಸಿದ್ದಪ್ಪ, ‘ಹಿಂಸೆ ಮತ್ತು ದ್ವೇಷವನ್ನೇ ಬಯಸಿ ಇಡೀ ಭೂಮಂಡಲದ ಸುತ್ತ ಮಾನವ ಸರಪಳಿ ರಚಿಸುವ ಜನರು ನಮಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಇದು ದೊಡ್ಡ ದುರಂತ. ಮಹಾತ್ಮ ಗಾಂಧೀಜಿಗಿಂತ ದೊಡ್ಡ ಹಿಂದೂ ಇರಲಿಲ್ಲ. ಆದರೆ, ಈ ಮತಾಂಧರು ಹಿಂದು ಧರ್ಮದ ಹೆಸರಿನಲ್ಲಿ ಮಹಾತ್ಮನನ್ನೇ ಕೊಂದರು. ಹಿಂಸೆ ಪ್ರಚೋದಿಸುವವರು ಯಾವುದೇ ಧರ್ಮದವರಾಗಿರಲಿ ಅವರನ್ನು ಖಂಡಿಸಬೇಕು’ ಎಂದರು.

ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ‘ದೇಶದಲ್ಲಿ ಹುಸಿ ಧಾರ್ಮಿಕತೆ, ಹುಸಿ ಸಂಸ್ಕೃತಿ ವಿಜೃಂಭಿಸುತ್ತಿದೆ. ರುಂಡಗಳನ್ನು ಕೇಳುವಂತಹ ತುಂಡು ತಂಡಗಳು ಹುಟ್ಟಿಕೊಂಡಿವೆ. ಭಿನ್ನಾಭಿಪ್ರಾಯಗಳಿಗೆ ಬಲಿಪೀಠಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನಮಗೆ ಬಹುತ್ವದ ಭಾವೈಕ್ಯ ಭಾರತ ಬೇಕೋ ಅಥವಾ ಬಲಿಪೀಠದ ಭಾರತ ಬೇಕೋ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ’ ಎಂದರು.

‘ಜಾತಿ, ಧರ್ಮ, ಕೋಮು ಹೆಸರಿನಲ್ಲಿ ಪ್ರೀತಿ, ಸಹಬಾಳ್ವೆಯ ಕೊಂಡಿಯನ್ನು ಮತಾಂಧರು ನಿರಂತರ ಕತ್ತರಿಸುತ್ತಿದ್ದಾರೆ. ಮಾನವೀಯತೆ ಮತ್ತು ಸೌಹಾರ್ದದ ಕೊಂಡಿ ಬೆಸೆಯುವವರಿಗೆ ಮಾತ್ರ ಈ ಭೂಮಿ ಮೇಲೆ ಬದುಕಲು ಹಕ್ಕಿದೆ ಎನ್ನುವುದನ್ನು ನಾವು ತೋರಿಸಬೇಕಿದೆ’ ಎಂದು ಕವಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದರು.

ನೆಲಮಂಗಲ ಅಡ್ಡರಸ್ತೆ ಬಳಿಯಿಂದ ಯಶವಂತಪುರ, ಮಲ್ಲೇಶ್ವರ, ವಿಧಾನಸೌಧ, ಕೆ.ಆರ್. ಮಾರುಕಟ್ಟೆ, ಮೈಸೂರು ರಸ್ತೆ, ನಾಯಂಡಹಳ್ಳಿ, ಕೆಂಗೇರಿ, ಬಿಡದಿಯಲ್ಲಿ ಮಾನವ ಸರಪಳಿ ರಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.