ADVERTISEMENT

ಅರಣ್ಯ ಒತ್ತುವರಿ: ಆತಂಕ ದೂರ ಮಾಡಿದ ಬಿಡಿಎ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಬಿಡಿಎ ಅಧಿಕಾರಿಗಳಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಸತೀಶ್‌ ಅವರು ಮಾಹಿತಿ ನೀಡಿದರು. ಬಡಾವಣೆಯ ನಿವಾಸಿಗಳು ಇದ್ದರು
ಬಿಡಿಎ ಅಧಿಕಾರಿಗಳಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಸತೀಶ್‌ ಅವರು ಮಾಹಿತಿ ನೀಡಿದರು. ಬಡಾವಣೆಯ ನಿವಾಸಿಗಳು ಇದ್ದರು   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಬನಶಂಕರಿ 6ನೇ ಹಂತದ ಬಡಾವಣೆಗೆ ಎದುರಾಗಿದ್ದ ಅರಣ್ಯ ಜಾಗ ಒತ್ತುವರಿ ಸಮಸ್ಯೆಯನ್ನು ನಿವಾಸಿಗಳ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

‘ಒತ್ತುವರಿ ಆಗಿರುವುದು ಜಂಟಿ ಸಮೀಕ್ಷೆಯಲ್ಲಿ ದೃಢಪಟ್ಟರೆ, ಅರಣ್ಯ ಇಲಾಖೆಗೆ ಒಪ್ಪಿಗೆಯಾಗುವ ಸ್ಥಳದಲ್ಲಿಯೇ ಬಿಡಿಎ ವಶದಲ್ಲಿರುವ ಭೂಮಿ ಹಸ್ತಾಂತರಿಸಿ ಈ ಸಮಸ್ಯೆ ಪರಿಹರಿಸಲಾಗುವುದು’ ಎಂದು ಬಿಡಿಎ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಿನಾಥ ಆಶ್ವಾಸನೆ ನೀಡಿದ್ದಾರೆ.

ಬಡಾವಣೆಯ ಆರನೇ ಹಂತದ ಎರಡನೇ ಬ್ಲಾಕ್‌ನ 38 ನಿವೇಶನಗಳು ಒತ್ತುವರಿಯಾದ ಜಾಗದಲ್ಲಿವೆ ಎಂದು ಅರಣ್ಯ ಇಲಾಖೆ ಗುರುತಿಸಿತ್ತು. ಹೀಗೆ ಗುರುತಿಸಿದ ಜಾಗದಲ್ಲಿ ಈಗಾಗಲೇ ಮನೆ ಕಟ್ಟಿಸಿಕೊಂಡಿರುವ ಇಲ್ಲಿನ ನಿವಾಸಿಗಳಲ್ಲಿ ಇದು ತೀವ್ರ ಆತಂಕ ಮೂಡಿಸಿತ್ತು.

ADVERTISEMENT

ಬಡಾವಣೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಿಡಿಎ ಅಧಿಕಾರಿಗಳು, ನಿವಾಸಿಗಳ ಆತಂಕ ನಿವಾರಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿಯೂ ಇದ್ದರು.

‘ಬಡಾವಣೆ ಅಭಿವೃದ್ಧಿಪಡಿಸಿದ ನಂತರ ಅರಣ್ಯ ಇಲಾಖೆಯು ಮೂರ್ನಾಲ್ಕು ವರ್ಷದ ಹಿಂದೆಯೇ ಅರಣ್ಯದ ಗಡಿಯಲ್ಲಿ ತಡೆಗೋಡೆ ಮತ್ತು ತಂತಿ ಬೇಲಿ ನಿರ್ಮಿಸಿದೆ. ಈಗ ಮತ್ತೆ ಒತ್ತುವರಿ ಗುರುತಿಸಿರುವುದು ಮಾಹಿತಿ ಕೊರತೆಯಿಂದ ಆಗಿರಬಹುದು. ಸಮಗ್ರ ಜಂಟಿ ಸಮೀಕ್ಷೆ ನಡೆಸಲಾಗುವುದು. ಅದರ ಫಲಿತಾಂಶ ಆಧರಿಸಿ ತೀರ್ಮಾನಕ್ಕೆ ಬರಲಾಗುವುದು. ಒಂದು ವೇಳೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ, ಅದಕ್ಕೆ ಬಿಡಿಎ ವಶದಲ್ಲಿ ಇರುವ ಭೂಮಿಯನ್ನು ಅರಣ್ಯಕ್ಕೆ ಹೊಂದಿಕೊಂಡೆ ವಿತರಿಸಲಾಗುವುದು. ಬಡಾವಣೆಯಲ್ಲಿ ಮನೆ ಕಟ್ಟಿಕೊಂಡವರಿಗೆ ಮತ್ತು ನಿವೇಶನದಾರರಿಗೆ ಯಾವುದೇ ಸಂಕಷ್ಟ ಎದುರಾಗದು. ಅವರು ನೆಮ್ಮದಿಯಿಂದ ಇರಬಹುದು’ ಎಂದು ಗೋಪಿನಾಥ ಹೇಳಿದ್ದಾರೆ.

ಒತ್ತುವರಿ ಬಗ್ಗೆ ವಿವರ ಪಡೆಯಲು ಸ್ಥಳಕ್ಕೆ ಆಗಮಿಸಿದ್ದ  ಅಧಿಕಾರಿಗಳಿಗೆ ಬನಶಂಕರಿ ಆರನೇ ಹಂತದ ಎರಡನೇ ಬಡಾವಣೆ ಹಾಗೂ ಕರಿಯನಪಾಳ್ಯ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಸತೀಶ್‌ ಮಾಹಿತಿ ನೀಡಿದರು. ಈ ಬಿಕ್ಕಟ್ಟಿನಿಂದ ತಮ್ಮನ್ನು ಪಾರು ಮಾಡಿ ಆದಷ್ಟು ಬೇಗ ನೆಮ್ಮದಿ ಒದಗಿಸಬೇಕು ಎಂದು ಒತ್ತುವರಿ ಭೀತಿಗೆ ಒಳಗಾದ ನಿವಾಸಿಗಳು ಮನವಿ ಮಾಡಿಕೊಂಡರು. ಸಂಘದ ಇತರ ಪದಾಧಿಕಾರಿಗಳು ಹಾಜರಿದ್ದರು.

‘ಚಿಂತಿಸಬೇಡಿ. ಆದಷ್ಟು ಬೇಗ ಈ ಬಿಕ್ಕಟ್ಟನ್ನು ಪರಿಹರಿಸಲಾಗುವುದು’ ಎಂದು ಬಿಡಿಎ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಹೊನ್ನರಾಜು ಅವರು ಹಿರಿಯ ನಾಗರಿಕರಾದ ನಂಜುಂಡಯ್ಯ ಮತ್ತು ಮೋಹನ್‌ ಅವರಿಗೆ ಅಭಯ ನೀಡಿದರು.

ಬಡಾವಣೆಯಲ್ಲಿನ ರಸ್ತೆಗಳ ಅಕ್ಕಪಕ್ಕ ಬೆಳೆದಿರುವ ಪೊದೆ, ಕಟ್ಟಿಕೊಳ್ಳುವ ಒಳಚರಂಡಿ, ಮುಚ್ಚಳ ಇಲ್ಲದ ಮ್ಯಾನ್‌ಹೋಲ್‌, ಕಿತ್ತು ಹೋಗಿರುವ ಡಾಂಬರು ಸಮಸ್ಯೆಗಳ ಬಗ್ಗೆ ಜಿ.ವಿ.ಸತೀಶ್‌ ಅವರು ಬಿಡಿಎ ಅಧಿಕಾರಿಗಳ ಗಮನಕ್ಕೆ ತಂದರು. ಈ ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ವಾಗ್ದಾನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.