ADVERTISEMENT

ಬಜೆಟ್‌ ಜನಾಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಬಜೆಟ್‌ ಜನಾಭಿಪ್ರಾಯ
ಬಜೆಟ್‌ ಜನಾಭಿಪ್ರಾಯ   

ನೋಟು ರದ್ಧತಿಯಿಂದ ಮಧ್ಯಮ ವರ್ಗದವರು ತತ್ತರಿಸಿದ್ದಾರೆ. ಬಜೆಟ್‌ನಲ್ಲಿಯೂ ಈ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. –ಸುಮಾ, ಗೃಹಿಣಿ

ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ಸುಂಕ ಕಡಿಮೆ ಮಾಡಿದ್ದಾರೆ. ಆದರೆ, ರಸ್ತೆ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಿತ್ತುಕೊಂಡಿದ್ದಾರೆ. –ಪ್ರಿಯಾ, ಉದ್ಯೋಗಿ

ಗ್ರಾಮಗಳಿಗೆ ಇಂಟರ್‌ನೆಟ್‌ ಒದಗಿಸುವುದು, ಸ್ಮಾರ್ಟ್‌ ಸಿಟಿ ನಿರ್ಮಾಣ ಘೋಷಣೆಗಳು ಭಾರತವನ್ನು ಬದಲಾವಣೆಯತ್ತ ಕರೆದೊಯ್ಯಲಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಬಜೆಟ್‌ ಖುಷಿ ಇದೆ.

ADVERTISEMENT

–ಪೂಜಾ ಗೌಡ, ವಿದ್ಯಾರ್ಥಿನಿ

ಬೆಂಗಳೂರಿಗೆ ಉಪನಗರ ರೈಲು (ಸಬ್‌ಅರ್ಬನ್ ರೈಲು) ಸೌಲಭ್ಯ ನೀಡಿರುವುದು ಖುಷಿಯಾಗಿದೆ. ಟ್ರಾಫಿಕ್‌ ಸಮಸ್ಯೆ ಪರಿಹಾರವಾಗಲಿದೆ. –ಸುಷ್ಮಿತಾ, ವಿದ್ಯಾರ್ಥಿನಿ

ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾ, ವೈ-ಫೈ ಅಳವಡಿಕೆಗೆ ನಿರ್ಧರಿಸಲಾಗಿದ್ದು, ಮಹಿಳಾ ಸುರಕ್ಷತಾ ದೃಷ್ಟಿಯಿಂದ ಇದು ಮುಖ್ಯವೆನಿಸುತ್ತದೆ. –ಆರ್‌.ನಿಶಾ, ವಿದ್ಯಾರ್ಥಿನಿ

ಕೃಷಿಕರಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಈ ಬಜೆಟ್‌ ಉತ್ತಮವಾಗಿದೆ. ಇದೊಂದು ಭವಿಷ್ಯದ ಬಜೆಟ್‌ ಆಗಿದೆ. ಅನುಷ್ಠಾನದಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು. –ಚಂದನ್‌, ಉದ್ಯೋಗಿ

ಕೆಳ ಮತ್ತು ಮೇಲು ವರ್ಗದವರನ್ನು ಗುರಿಯಾಗಿಸಿಕೊಂಡು ಮಂಡಿಸಿದ್ದಾರೆ. ದಿನ ಬಳಕೆಯ ವಸ್ತುಗಳು ದುಬಾರಿಯಾಗುತ್ತಿವೆ. ತೃಪ್ತಿದಾಯಕವಲ್ಲದ ಬಜೆಟ್‌. –ಅರ್ಪಿತಾ, ವಿದ್ಯಾರ್ಥಿನಿ

ದೇಶದ 8 ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದಾಗಿ ಘೋಷಣೆ ಮಾಡಿರುವುದು ಮೋದಿ ಸರ್ಕಾರದ ಮಹಿಳಾ ಪರ ಕಾಳಜಿಗೆ ಹಿಡಿದ ಕನ್ನಡಿ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚು ಲಾಭವಾಗಲಿದೆ.

–ರಶ್ಮಿ ಅಶೋಕ್, ಗೃಹಿಣಿ

ಟೋಲ್‌ ಕಂಪನಿಗಳು ದರ ಏರಿಕೆ ಮಾಡಿ ವಾಹನ ಚಾಲಕರನ್ನು ಸುಲಿಗೆ ಮಾಡುತ್ತಿವೆ. ಅದಕ್ಕೆ ಕಡಿವಾಣ ಹಾಕುವ ಬಗ್ಗೆ ಪ್ರಸ್ತಾಪಿಸಿಲ್ಲ. ನಗರ ಪ್ರದೇಶಗಳಲ್ಲಿನ ರಸ್ತೆಗಳ ಗುಣಮಟ್ಟಕ್ಕೆ ಒತ್ತು ಕೊಡಬೇಕಿತ್ತು

–ಬೆಳ್ಳೇಶ್, ಕಾರು ಚಾಲಕ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಬಜೆಟ್‌ನಲ್ಲಿ ಮನ್ನಾ ಮಾಡುವ ನಿರೀಕ್ಷೆ ಇತ್ತು. ದೇಶದ ಕೊಟ್ಟಂತರ ರೈತರ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿದೆ. ––ಮಲ್ಲೇಶ್, ರೈತ

ಆಹಾರ ಪದಾರ್ಥಗಳು ಹಾಗೂ ಗೃಹ ಉಪಯೋಗಿ ವಸ್ತುಗಳ ಬೆಲೆ ಇಳಿಕೆಯಾಗುವ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ಇಷ್ಟು ದಿನ ಶ್ರೀಮಂತರ ಪರವಾಗಿತ್ತು. ಇನ್ನಾದರೂ ನಮ್ಮತ್ತ ಕೇಂದ್ರ ಸರ್ಕಾರ ಗಮನ ಹರಿಸಲಿ. – ಚಂದ್ರಮ್ಮ, ವ್ಯಾಪಾರಿ

ಸಂಸದರ ವೇತನ ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸಲು ಕಾನೂನು ಅಗತ್ಯವಿರಲಿಲ್ಲ. ಅದಕ್ಕೆ ಬದಲಾಗಿ ಕಾರ್ಮಿಕರ, ಖಾಸಗಿ ಶಿಕ್ಷಕರ ಕನಿಷ್ಠ ವೇತನ ಪರಿಷ್ಕರಣೆ ಕಡ್ಡಾಯ ಕಾನೂನು ರಚಿಸಿದ್ದರೆ ಉಪಯೋಗವಾಗುತ್ತಿತ್ತು. – ಟಿ.ಎಸ್.ಸುಧಾರಾಣಿ, ವಿದ್ಯಾರ್ಥಿನಿ

ವಿಶ್ವವಿದ್ಯಾಲಯಗಳ ಗುಣಮಟ್ಟ ಸುಧಾರಣೆಗೆ ಬಜೆಟ್‌ನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿತ್ತು. -ಪ್ರಿನ್ಸಿ, ವಿದ್ಯಾರ್ಥಿನಿ

ಬಜೆಟ್‌ ಸಾಮಾನ್ಯ ಜನರಿಗೆ ಹೆಚ್ಚಿನ ಫಲಪ್ರದವಾಗಿಲ್ಲದಿದ್ದರೂ ಸಮಾಧಾನಕರವಾಗಿದೆ. ರೈತರ ಆದಾಯ ಹೆಚ್ಚಿಸಲು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ಕೊಟ್ಟಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ವೇತನದಾರರಿಗೆ ನಿರಾಸೆ ಉಂಟು ಮಾಡಿದೆ. –ರೂಪೇಶ್ ಕುಮಾರ್‌, ಸುಂಕದಕಟ್ಟೆ

ವೈದ್ಯಕೀಯ ವಿಮೆ ಮೇಲಿನ ತೆರಿಗೆ ಕಡಿತಗೊಳಿಸಿರುವುದು ಮತ್ತು ವಿಮಾ ಪರಿಹಾರ ಮೊತ್ತವನ್ನು ₹5 ಲಕ್ಷಕ್ಕೆ ಏರಿಕೆ ಮಾಡಿರುವುದು ನಿಜಕ್ಕೂ ಒಳ್ಳೆಯ ಬದಲಾವಣೆ. ಬಿದಿರು ಕೃಷಿಗೆ ಉತ್ತೇಜನ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.

–ಸುಮಂತ್‌ ಕಂಪ್ಲಿಮಠ, ಕೆಂಗೇರಿ ಉಪನಗರ

ಜವಳಿ ಉದ್ಯಮ ಮತ್ತು ವ್ಯಾಪಾರ ಬಗ್ಗೆ ಗಮನ ನೀಡಿಲ್ಲ. ಶಿಕ್ಷಣ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯ ಬಗ್ಗೆ ಪ್ರಾಮುಖ್ಯತೆ ಕೊಟ್ಟಿಲ್ಲ. ಶಾಲಾ ಶಿಕ್ಷಣವನ್ನು ಬ್ಲಾಕ್‌ ಬೋರ್ಡ್‌ನಿಂದ ಡಿಜಿಟಲ್‌ ಬೋರ್ಡ್‌ಗೆ ವರ್ಗಾಯಿಸುವುದು ಖುಷಿ ತ೦ದಿದೆ.

–ಚೈತ್ರಾ ಮಂದಾರ, ಉಳ್ಳಾಲ ಮುಖ್ಯರಸ್ತೆ, ಬೆಂಗಳೂರು

ಮಧ್ಯಮ ವರ್ಗಕ್ಕೆ ಅಷ್ಟೇನು ಆಶಾದಾಯಕವಾಗಿಲ್ಲ. ಪೆಟ್ರೋಲ್‌, ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಗೆ ಸೇರಿಸದಿರುವುದು ನಿರಾಸೆ ಮೂಡಿಸಿದೆ. ಮೊಬೈಲ್‌, ಟಿ.ವಿ, ಕಂಪ್ಯೂಟರ್‌ ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಿಸಿದೆ.

ಶರತ್ ಮಂಜುನಾಥ್‌, ಜೆ.ಪಿ.ನಗರ

ಮೇಲ್ನೋಟಕ್ಕೆ ಶಿಕ್ಷಣ ವಲಯಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಆದರೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಶಿಕ್ಷಣಕ್ಕೆ ಒತ್ತು ಸಿಕ್ಕಿಲ್ಲ. ಮಧ್ಯಮ ವರ್ಗವೂ ಖುಷಿಪಡುವಂತಿಲ್ಲ.
–ಶ್ರುತಿ ನಾಯಕ್‌, ಕೆಂಗೇರಿ ಉಪನಗರ

ವಿಜ್ಞಾನ ಮತ್ತು ಸಮಾಜವಿಜ್ಞಾನ ಎರಡಕ್ಕೂ ಸಮಾನ ಒತ್ತುನೀಡಬೇಕಿತ್ತು. ವಿಶ್ವವಿದ್ಯಾಲಯ ಅನುದಾನ ಆಯೋಗದಲ್ಲಿ (ಯುಜಿಸಿ) ಸುಧಾರಣೆಗಳನ್ನು ತರುವ ಮತ್ತು ಗುಣಮಟ್ಟದ ಸಂಸ್ಥೆಗಳಿಗೆ ಹೆಚ್ಚಿನ ಆಡಳಿತಾತ್ಮಕ, ಶೈಕ್ಷಣಿಕ ಸ್ವಾಯತ್ತತೆ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದಾಗ್ಯಾ ಯುಜಿಸಿಗೆ ಇನ್ನಷ್ಟು ಅನುದಾನ ನೀಡಬೇಕಿತ್ತು.

–ಸಿ.ಎ.ಅಜ್ಗರ್‌ ಖಾನ್‌, ಐಸೆಕ್‌ ಸಂಶೋಧನಾ ವಿದ್ಯಾರ್ಥಿ

ಪ್ರಧಾನಮಂತ್ರಿ ವಿದ್ಯಾರ್ಥಿ ವೇತನವನ್ನು ಬಿ.ಟೆಕ್‌ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸಿರುವುದು ಸರಿಯಲ್ಲ. ವಿಜ್ಞಾನ, ಸಮಾಜವಿಜ್ಞಾನ ಹಾಗೂ ಉಳಿದ ವಿಭಾಗಗಳಿಗೂ ಇದನ್ನು ವಿಸ್ತರಿಸಬೇಕಿತ್ತು.

–ಅಮ್ರಿನ್ ಕಮಲಾದ್ದೀನ್‌ ಫಖಿ, ಐಸೆಕ್‌ ಸಂಶೋಧನಾ ವಿದ್ಯಾರ್ಥಿನಿ

ಉದ್ಯೋಗ ಸೃಷ್ಟಿಯ ದೂರದೃಷ್ಟಿ, ಬೆಳೆ ನಷ್ಟ, ರೈತರ ಆತ್ಮಹತ್ಯೆಗೆ ಪರಿಹಾರದ ಬೆಳಕು ಚೆಲ್ಲದ ಬಜೆಟ್ ಇದು. ಮಧ್ಯಮ ವರ್ಗದ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಮಾಡದೆ, ₹250 ಕೋಟಿವರೆಗೆ ವಾರ್ಷಿಕ ವಹಿವಾಟು ನಡೆಸುವ ಕಂಪನಿಗಳ ಕಾರ್ಪೊರೇಟ್‌ ತೆರಿಗೆಯಲ್ಲಿ ಶೇ 25ರಷ್ಟು ಕಡಿತ ಮಾಡಿರುವುದು ಸರಿಯಲ್ಲ. – ಆರ್.ಕುಮಾರ್, ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ, ಮಲ್ಲತ್ತಹಳ್ಳಿ

ಬಡ ಕುಟುಂಬಕ್ಕೆ ₹5 ಲಕ್ಷವರೆಗೆ ಆರೋಗ್ಯ ಆರೋಗ್ಯ ವಿಮೆ ಒದಗಿಸುವುದು ಒಳ್ಳೆಯ ಬೆಳವಣಿಗೆ. ಈ ಬಜೆಟ್‌ ರೈತರ ಹಾಗೂ ಮಹಿಳೆಯರ ಪರವಾಗಿದೆ.

– ಬಿ.ಆರ್‌.ಸುರೇಂದ್ರನಾಥ್‌, ಸಂಗೀತ ನಿರ್ದೇಶಕ

ಈ ಬಜೆಟ್‌ ರೈತಸ್ನೇಹಿಯಾಗಿದ್ದರೂ ಅದರ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಲಿದೆ ಎಂಬುದನ್ನು ಕಾದುನೋಡಬೇಕು. ಸಂಸದರ ವೇತನ ಪರಿಷ್ಕರಣೆಗೆ ಮುಂದಾಗಿರುವುದು ಸರಿಯಲ್ಲ. ಜನಸಾಮಾನ್ಯರ ಬಗ್ಗೆ ಹೆಚ್ಚು ಒತ್ತು ನೀಡಬೇಕಿತ್ತು.

– ಪ್ರವೀಣ್ ಸೂಡಾ, ಸಿನಿಮಾ ಬರಹಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.