ADVERTISEMENT

‘ವರ್ಗಾವಣೆ ಕೋರಿ 92 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಕೆ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:34 IST
Last Updated 1 ಫೆಬ್ರುವರಿ 2018, 19:34 IST

ಬೆಂಗಳೂರು: ‘92 ಸಾವಿರ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ವರ್ಗಾವಣೆಗೆ ಅರ್ಜಿ ಸಲ್ಲಿಸುವ ಪೋರ್ಟಲ್‌ನಲ್ಲಿ ಕೆಲ ತೊಡಕುಗಳಿವೆ. ಈ ಸಂಬಂಧ ಕ್ರಮ ಕೈಗೊಳ್ಳುತ್ತೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ರಾಜ್ಯಮಟ್ಟದ ಪದಾಧಿಕಾರಿಗಳ ಶೈಕ್ಷಣಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಚುನಾವಣೆ ಘೋಷಣೆಗೆ ಮುನ್ನ ಅಥವಾ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದ ಬಳಿಕ ಶಿಕ್ಷಕರ ವರ್ಗಾವಣೆ ಸಂಬಂಧ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುತ್ತೇವೆ. ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶಿಕ್ಷಕರು ಆತಂಕ ಪಡುವ ಅಗತ್ಯವಿಲ್ಲ’ ಎಂದರು.

ADVERTISEMENT

‘ರಾಜ್ಯದ ಸರ್ಕಾರಿ ನೌಕರರಲ್ಲಿ ಶೇ 50ರಷ್ಟು ಶಿಕ್ಷಕರಿದ್ದಾರೆ. 6ನೇ ವೇತನ ಆಯೋಗವು ಅಂತಿಮ ವರದಿ ನೀಡಿದ ಬಳಿಕ ಶಿಕ್ಷಕರ ವೇತನ ಪರಿಷ್ಕರಣೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ವಿಧಾನಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ, ‘ಶೇ 86ರಷ್ಟು ಫಲಿತಾಂಶ ಬಂದರೂ ಕೆಲ ಪ್ರೌಢಶಾಲೆಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇಲಾಖೆಯಿಂದ ಪ್ರತಿ ಶಾಲೆಗೆ ತಿಂಗಳಿಗೆ ಕನಿಷ್ಠ 15 ನೋಟಿಸ್‌ಗಳು ಹೋಗುತ್ತವೆ. ಇದರಿಂದ ಶಿಕ್ಷಕರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ನೋಟಿಸ್ ಪದ್ಧತಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಸಂಘದ ಬೇಡಿಕೆಗಳು

* ಹಿರಿಯ ಶಿಕ್ಷಕರಿಗೆ ವಿಶೇಷ ವಾರ್ಷಿಕ ಬಡ್ತಿ ನೀಡಬೇಕು

* ಅನುದಾನಿತ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಇತ್ಯರ್ಥಕ್ಕೆ ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿಯ ಶಿಫಾರಸು ಜಾರಿ

* ಸಹ ಶಿಕ್ಷಕರ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದ ವ್ಯತ್ಯಾಸ ಸರಿಪಡಿಸಬೇಕು

* ಟಿಜಿಟಿ ಶಿಕ್ಷಕರನ್ನು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಜಾಗಕ್ಕೆ ವರ್ಗಾಯಿಸಬೇಕು

* ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರೌಢಶಾಲಾ ವಿಭಾಗಗಳಿಗೆ ಪ್ರತ್ಯೇಕ ಉಪಪ್ರಾಂಶುಪಾಲ ಹುದ್ದೆ ಮಂಜೂರು ಮಾಡಬೇಕು.

* ಉಪನಿರ್ದೇಶಕರ ಕಚೇರಿಗಳಲ್ಲಿ ಹಿಂದಿ ವಿಷಯ ಪರಿವೀಕ್ಷಕರ ಹುದ್ದೆ ಸೃಷ್ಟಿಸಬೇಕು

* ರಜಾ ಅವಧಿಯಲ್ಲಿ ತರಬೇತಿ, ಗಣತಿಕಾರ್ಯ, ಬೋಧಕೇತರ ಕರ್ತವ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವ ಪದ್ಧತಿ ರದ್ದುಗೊಳಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.