ADVERTISEMENT

‘ಸವಿತಾ ಸಮಾಜ ನೋಯಿಸದಿರಿ’

ವಿಚಾರಸಂಕಿರಣದಲ್ಲಿ ಕೃಷ್ಣಮೂರ್ತಿ ಮನವಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:34 IST
Last Updated 3 ಫೆಬ್ರುವರಿ 2018, 19:34 IST
‘ಸವಿತಾ ಸಮಾಜ ನೋಯಿಸದಿರಿ’
‘ಸವಿತಾ ಸಮಾಜ ನೋಯಿಸದಿರಿ’   

ಬೆಂಗಳೂರು: ‘ಕ್ಷೌರ ಮತ್ತು ನಾದಸ್ವರಕ್ಕೆ ಸವಿತಾ ಸಮಾಜದವರ ಸೇವೆ ನಿತ್ಯ ಅಗತ್ಯವಿದೆ. ಆದರೆ, ನಮ್ಮನ್ನು ಬಳಸಿ ಬಿಸಾಡುವಂತೆ ಇಡೀ ಸಮಾಜ ನಡೆಸಿಕೊಳ್ಳುತ್ತಿದೆ’ ಎಂದು ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತರ ಜಂಟಿ ಕ್ರಿಯಾ ವೇದಿಕೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳು’ ವಿಚಾರಸಂಕಿರಣದಲ್ಲಿ ಮಾತನಾಡಿದರು.

‘ತಪ್ಪು ಮಾಡಿದವರನ್ನು ನಿಂದಿಸಲು ಸವಿತಾ ಸಮಾಜದವರ ಕಸುಬಿನ ಹೆಸರು ಬಳಸುತ್ತಿರುವುದು ಇನ್ನೂ ನಿಂತಿಲ್ಲ. ನಿಷೇಧಿತ ಪದವನ್ನು ಪ್ರಜ್ಞಾವಂತರೂ ಪದೇ ಪದೇ ಬಳಸುವ ಮೂಲಕ ನಮ್ಮ ಸಮಾಜಕ್ಕೆ ಮಾನಸಿಕವಾಗಿ ಘಾಸಿ ಮಾಡುತ್ತಿದ್ದಾರೆ’ ಎಂದು ನೋವು ತೋಡಿಕೊಂಡರು.

ADVERTISEMENT

ಸವಿತಾ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಲಾಗಿದೆ. ಆದರೆ, ಇದರಲ್ಲಿ 108 ಜಾತಿಗಳಿವೆ. ಕೆಲವು ಪ್ರಬಲ ಜಾತಿಗಳೂ ಇವೆ. ಸವಿತಾ ಸಮಾಜ, ಕುಂಬಾರರು, ಮಡಿವಾಳರು ಸಾಮಾಜಿಕ ನ್ಯಾಯದಿಂದ ವಂಚಿತವಾಗಿದ್ದಾರೆ. ಈ ಸಮುದಾಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ರಾಜು ಕ್ಷತ್ರಿಯ ಸಂಘದ ಕಾರ್ಯದರ್ಶಿ ವೆಂಕಟರಾಜು, ‘ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸಂಕ್ರಮಣದ ಪರಿಸ್ಥಿತಿಗೆ ಸಿಲುಕಿದ್ದಾರೆ. ಈ ವರ್ಗಗಳಲ್ಲಿರುವ ಸಂಘಟನೆಯ ಕೊರತೆಯನ್ನೇ ರಾಜಕೀಯ ಪಕ್ಷಗಳು ಬಂಡವಾಳ ಮಾಡಿಕೊಂಡಿವೆ. ನಿಜವಾದ ಸಮಸ್ಯೆಗಳನ್ನು ಬಗೆಹರಿಸದೇ ಬರೀ ಭರವಸೆಗಳ ಮೂಲಕ ಮೂಗಿಗೆ ತುಪ್ಪ ಸವರುತ್ತಿದ್ದಾರೆ’ ಎಂದು ಕಿಡಿಕಾರಿದರು.

ಜ್ಯೋತಿಪಣ ಗಾಣಿಗರ ಸಂಘದ ಅಧ್ಯಕ್ಷ ಪಿ.ವಿ.ನರಸಿಂಹಯ್ಯ, ‘ಹಿಂದುಳಿದ ವರ್ಗದವರು ಮತ್ತುಅಲ್ಪಸಂಖ್ಯಾತರು ಶೈಕ್ಷಣಿಕ, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿಯೂ ಅತ್ಯಂತ ಹಿಂದುಳಿದಿದ್ದಾರೆ. ಶೋಷಣೆಯಿಂದ ಮುಕ್ತವಾಗಿ ಸಾಮಾಜಿಕ ನ್ಯಾಯ‍ ಪಡೆಯಬೇಕಾದರೆ ಮೊದಲು ಒಂದೇ ನೆಲೆಯಲ್ಲಿ ಎಲ್ಲರೂ ಒಗ್ಗೂಡಬೇಕಿದೆ’ ಎಂದು ಹೇಳಿದರು.

ವೇದಿಕೆ ರಾಜ್ಯ ಅಧ್ಯಕ್ಷ ಕೃಷ್ಣಾನಾಯಕ್, ‘ರಾಜ್ಯದಲ್ಲಿ ಮೀಸಲಾತಿ ಸೌಲಭ್ಯ ಇದ್ದರೂ ದೇವಾಂಗ, ಕುರುಹೀನಶೆಟ್ಟಿ, ಭಾವಸಾರ ಸೇರಿ ಅನೇಕ ಸಣ್ಣ ಜಾತಿಗಳಿಗೆ ಮೀಸಲಾತಿ ಕನಸಾಗಿ ಉಳಿದಿದೆ’ ಎಂದು ಹೇಳಿದರು.

‘ಮುಸ್ಲಿಮರ ಮೇಲೆ ದ್ವೇಷ: ಆತಂಕದ ಬೆಳವಣಿಗೆ’

‘ದೇಶದಲ್ಲಿ ಮುಸ್ಲಿಮರ ಮೇಲೆ ದ್ವೇಷಕಾರುವ ವಾತಾವರಣ ನಿರ್ಮಿಸಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಕಳವಳ ವ್ಯಕ್ತಪಡಿಸಿದರು.

‘ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತುವವರನ್ನು ಚಿವುಟಿ ಹಾಕುವ ಪ್ರವೃತ್ತಿ ಬೆಳೆಯುತ್ತಿದೆ. ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಹೋರಾಟ ಮಾಡಬೇಕಿದೆ. ಜಾಗತೀಕರಣ ಪ್ರಭಾವದಿಂದ ಹಿಂದುಳಿದ ವರ್ಗದ ಜನತೆಗೆ ಅತಿದೊಡ್ಡ ಪೆಟ್ಟು ಬಿದ್ದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.