ADVERTISEMENT

ವಕೀಲರ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST
ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿರುವ ವಕೀಲರು
ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿರುವ ವಕೀಲರು   

ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿಯಿರುವ ನ್ಯಾಯಮೂರ್ತಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ವಕೀಲರು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಹೈಕೋರ್ಟ್‌ನ ಗೋಲ್ಡೆನ್ ಜ್ಯೂಬಿಲಿ ಗೇಟ್ ಎದುರು ನಡೆಯುತ್ತಿದ್ದ ಸತ್ಯಾಗ್ರಹದ ಸ್ಥಳಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನೇಮಕಾತಿ ಬಗ್ಗೆ ಸದನದಲ್ಲಿ ಗೊತ್ತುವಳಿ ಅಂಗೀಕರಿಸಲಾಗುವುದು’ ಎಂದು ಭರವಸೆ ನೀಡಿದರು.

‘ನ್ಯಾಯಮೂರ್ತಿಗಳ ನೇಮಕಾತಿ ಮಾಡಲು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ವಕೀಲರ ಉಪವಾಸ ಮುಷ್ಕರಕ್ಕೆ ನಮ್ಮ ಬೆಂಬಲವಿದೆ. ದೆಹಲಿಗೆ ಹೋದಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಲಾಗುವುದು’ ಎಂದರು.

ADVERTISEMENT

ಬೆಳಿಗ್ಗೆ 10.30ಕ್ಕೆ ಉಪವಾಸ ಸತ್ಯಾಗ್ರಹ ಆರಂಭಗೊಂಡಿತು. ಹಿರಿಯ ವಕೀಲರರಾದ  ಬಿ.ವಿ. ಆಚಾರ್ಯ, ಕೆ. ಸುಬ್ಬಾ ರಾವ್, ಉದಯ ಹೊಳ್ಳ, ಎಸ್.ಎಸ್. ನಾಗಾನಂದ್, ರವಿವರ್ಮ ಕುಮಾರ್, ಅಶೋಕ್ ಹಾರನಹಳ್ಳಿ, ಡಿ.ಎಲ್.ಎನ್.ರಾವ್, ಸಿ.ಎಚ್. ಜಾದವ್, ಸಜ್ಜನ್ ಪೂವಯ್ಯ, ಪದ್ಮನಾಭ ವಿ.ಮಹಲೆ, ಜೈಕುಮಾರ್ ಪಾಟೀಲ‌, ಸದಾಶಿವ ರೆಡ್ಡಿ, ಡಿ.ಎಲ್.ಜಗದೀಶ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಮಾಜಿ ಅಧ್ಯಕ್ಷರಾದ ಕೆ.ಎನ್.ಪುಟ್ಟೇಗೌಡ, ಎಚ್.ಸಿ.ಶಿವರಾಮು ಸೇರಿದಂತೆ 250ಕ್ಕೂ ಹೆಚ್ಚು ವಕೀಲರು ಭಾಗವಹಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ಶಾಸಕ ಸುರೇಶ್ ಕುಮಾರ್, ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ ಕೂಡ ಸ್ಥಳಕ್ಕೆ ಭೇಟಿ ನೀಡಿ ವಕೀಲರ ಮನವಿ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.