ADVERTISEMENT

4 ವರ್ಷವಾದರೂ ಬಳಕೆಯಾಗದ ನೀರಿನ ಟ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
4 ವರ್ಷವಾದರೂ ಬಳಕೆಯಾಗದ ನೀರಿನ ಟ್ಯಾಂಕ್‌
4 ವರ್ಷವಾದರೂ ಬಳಕೆಯಾಗದ ನೀರಿನ ಟ್ಯಾಂಕ್‌   

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಅಭಿವೃದ್ಧಿ ಯೋಜನಾ ಪ್ರಾಧಿಕಾರದಿಂದ ಹೆಸರಘಟ್ಟ ಹೋಬಳಿ ಕಾಕೋಳು ಗ್ರಾಮದಲ್ಲಿ ನಾಲ್ಕು ವರ್ಷದ ಹಿಂದೆ ನಿರ್ಮಿಸಿರುವ ನೀರಿನ ಟ್ಯಾಂಕ್‌ ಬಳಕೆಯಾಗದೆ ವ್ಯರ್ಥವಾಗಿದೆ.

2012–13ರಲ್ಲಿ ಕೊಳವೆ ನೀರು ಸರಬರಾಜು ಯೋಜನೆಯಡಿ ₹25 ಲಕ್ಷ ವೆಚ್ಚದಲ್ಲಿ 1ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಈ ಟ್ಯಾಂಕ್‌ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದು ವರ್ಷಗಳೇ ಕಳೆದಿದ್ದರೂ ಉದ್ಘಾಟನೆ ಭಾಗ್ಯ ದೊರೆತಿಲ್ಲ.

ಇದರಲ್ಲಿ ನೀರು ಸಂಗ್ರಹಿಸಿ, ಗ್ರಾಮಗಳಿಗೆ ಸರಬರಾಜು ಮಾಡಿದ್ದರೆ, ಕಾಕೋಳು ಗ್ರಾಮದ ನೀರಿನ ಬವಣೆ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು ಎಂದು ಸ್ಥಳೀಯ ನಿವಾಸಿ ರಾಜು ಹೇಳಿದರು.

ADVERTISEMENT

‘ಟ್ಯಾಂಕ್‌ಗೆ ನೀರು ಸರಬರಾಜು ಮಾಡಲು ಕೊಳವೆ ಬಾವಿಯನ್ನು ಕೊರೆಯಲಾಗಿದೆ. ನೀರು ಸರಬರಾಜು ಮಾಡಲು ಪೈಪ್‌ನ್ನೂ ಅಳವಡಿಸಲಾಗಿದೆ. ಆದರೆ, ಟ್ಯಾಂಕ್‌ಗೆ ನೀರು ತುಂಬಿಸಿ ಗ್ರಾಮಕ್ಕೆ ಬಿಡುವ ಕೆಲಸ ಮಾತ್ರ ಆಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್, ‘ನಾಲ್ಕು ವರ್ಷಗಳಲ್ಲಿ ಜಿಲ್ಲಾ ಪಂಚಾಯಿತಿಯ ನಾಲ್ಕು ಸಹಾಯಕ ಎಂಜಿನಿಯರ್‌ಗಳು ವರ್ಗಾವಣೆಗೊಂಡಿದ್ದಾರೆ. ಬಂದ ಎಂಜಿನಿಯರ್‌ಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ಹೇಳಿದರು.

ಉತ್ತರ ತಾಲ್ಲೂಕು ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ಶ್ರೀನಾಥ್, ‘ಟ್ಯಾಂಕ್ ನಿರ್ಮಾಣ ಕೆಲಸ ಮುಗಿದೆ. ಇತ್ತೀಚೆಗೆ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದೀನಿ. ಸಮಸ್ಯೆ ಅರ್ಥ ಮಾಡಿಕೊಂಡಿದ್ದು, ವಾರದೊಳಗೆ ನೀರು ತುಂಬಿಸಿ, ಸರಬರಾಜು ಮಾಡುವ ಕೆಲಸ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.