ADVERTISEMENT

ಶೇ 50ರಷ್ಟು ಪಾಲು ಭರಿಸಬೇಕಿದೆ ರಾಜ್ಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
ಶೇ 50ರಷ್ಟು ಪಾಲು ಭರಿಸಬೇಕಿದೆ ರಾಜ್ಯ
ಶೇ 50ರಷ್ಟು ಪಾಲು ಭರಿಸಬೇಕಿದೆ ರಾಜ್ಯ   

ಬೆಂಗಳೂರು/ ಹುಬ್ಬಳ್ಳಿ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ ಶೇ 50ರಷ್ಟು ಹಣ ನೀಡಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ ಗುಪ್ತಾ  ತಿಳಿಸಿದ್ದಾರೆ.

‘ಈ ಯೋಜನೆಯಿಂದ 160 ಕಿ.ಮೀ. ಉದ್ದದ ರೈಲು ಜಾಲ ಅಭಿವೃದ್ಧಿ ಹೊಂದಲಿದೆ. ರೈಟ್ಸ್‌ ಸಂಸ್ಥೆ ನೀಡಿದ ವರದಿ ಆಧಾರದ ಮೇಲೆ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಅವರು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈಲ್ವೆ ಇಲಾಖೆ ಮಂಗಳವಾರ ಬಿಡುಗಡೆ ಮಾಡಿರುವ ಪಿಂಕ್‌ ಬುಕ್‌ನಲ್ಲಿ ಸಬ್‌ಅರ್ಬನ್‌ ಜಾಲ ಅಭಿವೃದ್ಧಿಪಡಿಸುವ ಕುರಿತು ಉಲ್ಲೇಖಿಸಲಾಗಿದೆ. ಇದಕ್ಕೆ ಸಾಂಕೇತಿಕವಾಗಿ ₹ 1 ಕೋಟಿ ಅನುದಾನ ಕಾದಿರಿಸಲಾಗಿದೆ. ಇದು ಸಂತಸದ ವಿಷಯ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.

ADVERTISEMENT

‘ನಮ್ಮ ಬಹುದಿನದ ಕನಸು ನನಸಾಗುವ ದಿನಗಳು ಬಂದಿವೆ. ಬೆಂಗಳೂರಿನಂತಹ ನಗರಕ್ಕೆ ಉಪನಗರ ರೈಲು ಜಾಲವನ್ನು ಅಭಿವೃದ್ಧಿಪಡಿಸುವುದು ತೀರಾ ಅಗತ್ಯ. ಕೇಂದ್ರ ಸರ್ಕಾರ ತಡವಾಗಿಯಾದರೂ ಈ ಯೋಜನೆಗೆ ಮಂಜೂರಾತಿ ನೀಡಿದ್ದು ಸಮಾಧಾನ ತಂದಿದೆ’ ಎಂದು ಕರ್ನಾಟಕ ರೈಲ್ವೆ ವೇದಿಕೆಯ ಕೆ.ಎನ್‌.ಕೃಷ್ಣಪ್ರಸಾದ್‌ ’ಪ್ರಜಾವಾಣಿ’ಗೆ ತಿಳಿಸಿದರು.

ಈ ಯೋಜನೆಗೆ 17 ಸಾವಿರ ಕೋಟಿ ಕಾದಿರಿಸಿದ್ದೇವೆ ಎಂದು ಬಜೆಟ್‌ ಭಾಷಣದಲ್ಲಿ ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದರು. ಆದರೆ, ಪಿಂಕ್‌ ಬುಕ್‌ನಲ್ಲಿರುವ ಮಾಹಿತಿ ಪ್ರಕಾರ ಈ ಯೋಜನೆಗೆ ₹ 12,061 ಕೋಟಿ ಅನುದಾನ ಮೀಸಲಿಡಲಾಗಿದೆ.

‘ಉಪನಗರ ರೈಲು ಯೋಜನೆ ಅಲ್ಲದೇ ನಗರದ ವ್ಯಾಪ್ತಿಯ ಇನ್ನಷ್ಟು ಯೋಜನೆಗಳನ್ನು ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ. ಕೆಲವು ಬಾಕಿ ಯೋಜನೆಗಳಿಗೂ ಹಣ ಬಿಡುಗಡೆ ಮಾಡುವ ಭರವಸೆ ನೀಡಲಾಗಿದೆ. ಈ ಎಲ್ಲ ಮೊತ್ತಗಳು ಸೇರಿದರೆ ₹ 17 ಸಾವಿರ ಕೋಟಿ ಆಗಬಹುದು’ ಎಂದು ಕೃಷ್ಣಪ್ರಸಾದ್‌ ಹೇಳಿದರು.

ಈ ಯೋಜನೆಗೆ ₹ 349 ಕೋಟಿ ಹೂಡಿಕೆ ಮಾಡಲು ರಾಜ್ಯ ಸಚಿವ ಸಂಪುಟವು ಈಗಾಗಲೇ ಮಂಜೂರಾತಿ ನೀಡಿದೆ.  ಕೇಂದ್ರದಿಂದ ಅನುದಾನ ಸಿಗುವುದು ಖಾತರಿ ಆಗಿದೆ. ಹಾಗಾಗಿ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಆದಷ್ಟು ಹೆಚ್ಚು ಹಣ ಒದಗಿಸಬೇಕು. ₹ 1,000 ಕೋಟಿಯನ್ನಾದರೂ ಕಾದಿರಿಸಬೇಕು ಎಂದು ಪ್ರಜಾರಾಗ್‌ ಸಂಘಟನೆಯ ಸಂಜೀವ ದ್ಯಾಮಣ್ಣವರ್‌ ಒತ್ತಾಯಿಸಿದರು.

ಯೋಜನೆಗೆ ಮೊದಲ ಹಂತದಲ್ಲಿ ₹ 1,745 ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಹಾಗೂ 26 ಹೊಸ ಮೆಮು ರೈಲುಗಳನ್ನು ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿತ್ತು.  ಯಶವಂತಪುರ– ಚನ್ನಸಂದ್ರ ಮತ್ತು ಬೈಯಪ್ಪನಹಳ್ಳಿ– ಹೊಸೂರು ಮಾರ್ಗಗಳಲ್ಲಿ ಜೋಡಿಹಳಿ ಅಳವಡಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಲು ಚಿಂತನೆ ನಡೆಸಿತ್ತು. ಸಾಂಪ್ರದಾಯಿಕ ರೈಲುಗಳನ್ನು ಮೇಲ್ದರ್ಜೆಗೇರಿಸಲು ಪ್ರತ್ಯೇಕ ₹ 345 ಕೋಟಿ ಅನುದಾನ ಒದಗಿಸುವ ಪ್ರಸ್ತಾವಕ್ಕೂ ಸಮ್ಮತಿ ಸಿಕ್ಕಿತ್ತು.  ಕೇಂದ್ರ ಸರ್ಕಾರ ₹ 12,060 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ನೀಡಿರುವುದರಿಂದ ಅದಕ್ಕೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಬೇಕಾಗಿದೆ. 

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಚಿಕ್ಕಬಾಣಾವರ ಹಾಸನ ಮಾರ್ಗದ (166 ಕಿ.ಮೀ) ವಿದ್ಯುದೀಕರಣಕ್ಕೂ ₹ 155.17 ಕೋಟಿ ಅನುದಾನ ನೀಡಿದೆ. ಇದರಿಂದ ಉಪನಗರ ರೈಲು ಜಾಲ ಬಲಪಡಿಸುವುದಕ್ಕೂ ಅನುಕೂಲ ಆಗಲಿದೆ. ವೈಟ್‌ಫೀಲ್ದ್‌– ಬೆಂಗಳೂರು ನಗರ– ಕೆ.ಆರ್‌.ಪುರ ನಡುವಿನ 23 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ ನಾಲ್ಕು ಹಳಿಗಳ ಅಳವಡಿಕೆಗೂ ಅನುದಾನ ಒದಗಿಸಲಾಗಿದೆ.

ಉಪನಗರ ರೈಲು ಯಾವುದಕ್ಕೆ ಎಷ್ಟು?

ಉದ್ದೇಶ, ಮಂಜೂರಾದ ಮೊತ್ತ

ಎತ್ತರಿಸಿದ ರಸ್ತೆ ನಿರ್ಮಾಣ, ನೆಲ ಮಟ್ಟದ ಹಳಿಗಳ ಸಾಮರ್ಥ್ಯವೃದ್ಧಿ, ₹ 12,061 ಕೋಟಿ

ರಾಜ್ಯ ಭರಿಸಬೇಕಾದ ಮೊತ್ತ ₹ 6,030

ಯಶವಂತಪುರ– ಚನ್ನಸಂದ್ರ ಜೋಡಿಹಳಿ ನಿರ್ಮಾಣ (21.7 ಕಿ.ಮೀ), ₹ 169.65 ಕೋಟಿ

ಬೈಯಪ್ಪನಹಳ್ಳಿ–ಹೊಸೂರು ಮಾರ್ಗದಲ್ಲಿ ಜೋಡಿಹಳಿ ನಿರ್ಮಾಣ (48 ಕಿ.ಮೀ), ₹375.67 ಕೋಟಿ

ಬೈಯಪ್ಪನಹಳ್ಳಿಯಲ್ಲಿ 3ನೇ ಕೋಚಿಂಗ್‌ ಟರ್ಮಿನಲ್‌, ₹ 116 ಕೋಟಿ

ಬಾಣಸವಾಡಿ ಮೆಮು ಶೆಡ್‌ ಮೇಲ್ದರ್ಜೆಗೇರಿಸಲು ₹ 152.83 ಕೋಟಿ

ಉಪನಗರ ರೈಲು ಯೋಜನೆಯ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಸ್ಥಾಪಿಸುವ ನಿಟ್ಟಿನಲ್ಲಿ  ಪ್ರಯತ್ನಗಳು ನಡೆದಿವೆ. ನಗರ ಭೂಸಾರಿಗೆ ನಿರ್ದೇಶನಾಲಯವು (ಡಲ್ಟ್‌ ) 2017ರ ಜುಲೈನಲ್ಲೇ ಎಸ್‌ಪಿವಿಯ ಕರಡನ್ನು ಸಿದ್ಧಪಡಿಸಿತ್ತು. ಆದರೆ ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಯೋಜನೆ ಇನ್ನೂ ಚುರುಕುಗೊಳ್ಳಬೇಕಾದರೆ ಆದಷ್ಟು ಬೇಗ ಎಸ್‌ಪಿವಿ ರಚಿಸಬೇಕು. ಇದಕ್ಕೆ ಇನ್ನಷ್ಟು ಕಾಲಹರಣ ಮಾಡಿದರೆ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಬವಾಗಲಿದೆ ಎಂದು ಸಂಜೀವ್‌ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.