ADVERTISEMENT

ಸಿಬ್ಬಂದಿಗೆ ಬೆದರಿಕೆ: ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST

ಬೆಂಗಳೂರು: ‘ಕಚೇರಿಯಿಂದ ಟ್ರಿನಿಟಿ ಮೆಟ್ರೊ ನಿಲ್ದಾಣಕ್ಕೆ ಹೋಗುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಹೀಯಾಳಿಸಿ ಬೆದರಿಕೆ ಹಾಕಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‌ ಕಚೇರಿಯ ಸಿಬ್ಬಂದಿ ಹಲಸೂರು ಠಾಣೆಗೆ ದೂರು ನೀಡಿದ್ದಾರೆ.

‘ಫೆ.4ರಂದು ಮಿಡ್‌ಫೋರ್ಡ್‌ ಉದ್ಯಾನ ರಸ್ತೆಯಲ್ಲಿ ಹೋಗುತ್ತಿದ್ದಾಗ ನನ್ನನ್ನು ತಡೆದಿದ್ದ ಅಪರಿಚಿತರು, ‘ರಾಜೀವ್‌ ಚಂದ್ರಶೇಖರ್‌ ಪರ ಕೆಲಸ ಮಾಡುತ್ತಾ ಇದ್ದಿಯಲ್ಲಾ?’ ಎಂದಿದ್ದರು. ಅದಕ್ಕೆ ತಲೆಕೆಡಿಸಿಕೊಳ್ಳದೆ ಮುಂದೆ ಹೋದೆ. ಪುನಃ ಅದೇ ಮಾತನ್ನು ಕೂಗಿ ಹೇಳಿದರು. ಆಗ ನಾನು, ‘ಹೌದು’ ಎಂದು ಉತ್ತರಿಸಿದೆ’ ಎಂದು ದೂರಿನಲ್ಲಿ ಸಿಬ್ಬಂದಿ ಬರೆದಿದ್ದಾರೆ.

‘ನೀನು ಡಿಜಿಟಲ್‌ ಮಾರ್ಕೆಟಿಂಗ್‌ ನೋಡ್ಕೊತ್ತಿದ್ದಿಯಲ್ಲ. ಜಾಸ್ತಿ ಬುದ್ಧಿವಂತಿಕೆ ತೋರಿಸಬೇಡ’ ಎಂದು ಅಪರಿಚಿತರು ಹೇಳಿದ್ದರು. ಆಗ, ‘ಆಯ್ತು’ ಎಂದು ನಾನು ಮುಂದೆ ಹೋಗಲು ಯತ್ನಿಸಿದೆ. ನನ್ನನ್ನು ಹಿಂಬಾಲಿಸಿದ ಅವರು, ‘ನೀನು ವೈಟ್‌ಫೀಲ್ಡ್‌ನಲ್ಲಿ ಇರುವುದಲ್ಲವಾ. ಅಲ್ಲಿ ಜಾಸ್ತಿ ವಾಹನಗಳು ಓಡಾಡುತ್ತವೆ ಗೊತ್ತಲ್ವಾ. ಅದೇ ವಾಹನಗಳು ನಿಮ್ಮ ಮೇಲೆಯೂ ಹರಿದುಹೋಗಬಹುದು’ ಎಂದು ಬೆದರಿಸಿದ್ದರು ಎಂದು ಸಿಬ್ಬಂದಿ ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.