ADVERTISEMENT

ಉಕ್ಕಿನ ಸೇತುವೆ ಮತ್ತಷ್ಟು ಉದ್ದ

ಶಿವಾನಂದ ವೃತ್ತದ ಬಳಿ ಕಾಮಗಾರಿ ಪರಿಶೀಲಿಸಿದ ಮೇಯರ್‌ ಸಂಪತ್‌ ರಾಜ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:37 IST
Last Updated 6 ಫೆಬ್ರುವರಿ 2018, 19:37 IST
ಸೇತುವೆ ಕಾಮಗಾರಿಯನ್ನು ಆರ್‌.ಸಂಪತ್‌ ರಾಜ್‌ ಪರಿಶೀಲಿಸಿದರು. ಉಪ ಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಹಾಗೂ ಕೆ.ಟಿ.ನಾಗರಾಜ್‌ ಇದ್ದಾರೆ
ಸೇತುವೆ ಕಾಮಗಾರಿಯನ್ನು ಆರ್‌.ಸಂಪತ್‌ ರಾಜ್‌ ಪರಿಶೀಲಿಸಿದರು. ಉಪ ಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಹಾಗೂ ಕೆ.ಟಿ.ನಾಗರಾಜ್‌ ಇದ್ದಾರೆ   

ಬೆಂಗಳೂರು: ಶಿವಾನಂದ ವೃತ್ತದ ಬಳಿ ನಿರ್ಮಿಸುತ್ತಿರುವ ಉಕ್ಕಿನ ಸೇತುವೆ ಕಾಮಗಾರಿಯನ್ನು ಮೇಯರ್‌ ಆರ್‌.ಸಂಪತ್‌ ರಾಜ್‌ ಮಂಗಳವಾರ ಪರಿಶೀಲಿಸಿದರು.

ಸೇತುವೆ ನಿರ್ಮಾಣಕ್ಕೆ 2017ರ ಜೂನ್‌ 30ರಂದು ಕಾರ್ಯಾದೇಶ ನೀಡಲಾಗಿತ್ತು. 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ವಿಧಿಸಲಾಗಿತ್ತು. ಆದರೆ, ಸೇತುವೆ ನಿರ್ಮಾಣವನ್ನು ವಿರೋಧಿಸಿ ಸ್ಥಳೀಯರು ಕೋರ್ಟ್‌ ಮೊರೆ ಹೋಗಿದ್ದರು. ಕಾಮಗಾರಿಯನ್ನು ಮುಂದುವರಿಸುವಂತೆ ಕೋರ್ಟ್‌ ಆದೇಶ ನೀಡಿತ್ತು ಎಂದು ಅವರು ತಿಳಿಸಿದರು.

ರಸ್ತೆ ಮೂಲಸೌಕರ್ಯ (ಯೋಜನೆ) ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌, ‘ಮೂಲ ಪ್ರಸ್ತಾವದಲ್ಲಿ ಶಿವಾನಂದ ವೃತ್ತದಿಂದ ರೈಲ್ವೆ ಕೆಳಸೇತುವೆ ಕಡೆಗೆ ರ‍್ಯಾಂಪ್‌ ಇಳಿಜಾರಿನ ಪ್ರಮಾಣ ಶೇ 6.6ರಷ್ಟು ಇತ್ತು. ಸೇತುವೆಯು ಇಷ್ಟು ಎತ್ತರ ಇದ್ದರೆ ರೈಲ್ವೆ ಕೆಳಸೇತುವೆ ಮೇಲೆ ಹಾದು
ಹೋಗಲಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಶೇ 5.6ಕ್ಕೆ ಕಡಿತಗೊಳಿಸಲಾಗಿದೆ. ಅದೇ ರೀತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ರ‍್ಯಾಂಪ್‌ ಇಳಿಜಾರಿನ ಪ್ರಮಾಣ ಶೇ 5.5ರಷ್ಟು ಇದ್ದದ್ದು ಈಗ ಶೇ 3.5ಕ್ಕೆ ಕಡಿತಗೊಳಿಸಲಾಗಿದೆ’ ಎಂದು ಅವರು ವಿವರಿಸಿದರು.

ADVERTISEMENT

ರ‍್ಯಾಂಪ್‌ ಇಳಿಜಾರಿನ ಪ್ರಮಾಣ ಕಡಿಮೆ ಆದಷ್ಟೂ ಸೇತುವೆಯ ಉದ್ದ ಹಾಗೂ ಕಂಬಗಳ ಸಂಖ್ಯೆ ಹೆಚ್ಚಲಿದೆ. 326 ಮೀಟರ್‌ ಉದ್ದದ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿತ್ತು.
ಈಗ 483 ಮೀಟರ್‌ ಉದ್ದ ನಿರ್ಮಿಸಲಾಗುತ್ತದೆ. ಕಂಬಗಳ ಸಂಖ್ಯೆ 6ರಿಂದ 16ಕ್ಕೆ ಏರಿಕೆಯಾಗಲಿದೆ. ಇದರಿಂದ ಯೋಜನಾ ವೆಚ್ಚವೂ
ಹೆಚ್ಚಾಗಲಿದೆ. ಸದ್ಯ ಪೂರ್ವಭಾವಿ ಕೆಲಸಗಳು ನಡೆಯುತ್ತಿವೆ. 11 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಉಕ್ಕು, ಸಿಮೆಂಟ್‌ನ ಸಂಯುಕ್ತ ರಚನೆ

ಈ ಸೇತುವೆಯು ಉಕ್ಕು ಹಾಗೂ ಸಿಮೆಂಟ್‌ನ ಸಂಯುಕ್ತ ರಚನೆಯಾಗಿದೆ. ಕಂಬಗಳ ಬುನಾದಿಯನ್ನು ಸಿಮೆಂಟ್‌ ಮೂಲಕ ನಿರ್ಮಿಸಲಾಗುತ್ತದೆ. ನೆಲಮಟ್ಟದಿಂದ ಗರ್ಡರ್‌ಗಳನ್ನು ಅಳವಡಿಸಲಾಗುತ್ತದೆ. ಇವುಗಳ ಮೇಲೆ ಸಿಮೆಂಟ್‌ನ ಸ್ಲ್ಯಾಬ್‌ಗಳನ್ನು ಇಡಲಾಗುತ್ತದೆ. ಅದರ ಮೇಲೆ ರಸ್ತೆ ನಿರ್ಮಿಸ
ಲಾಗುತ್ತದೆ ಎಂದು ಕೆ.ಟಿ.ನಾಗರಾಜ್‌ ವಿವರಿಸಿದರು.

ಅಂಕಿ–ಅಂಶ

₹50 ಕೋಟಿ -ಯೋಜನೆಯ ಒಟ್ಟು ವೆಚ್ಚ


₹19.85 ಕೋಟಿ -ಸೇತುವೆ ನಿರ್ಮಾಣ ವೆಚ್ಚ


483 ಮೀಟರ್‌ -ಸೇತುವೆಯ ಉದ್ದ

15 ಮೀಟರ್‌ -ಸೇತುವೆಯ ಅಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.