ADVERTISEMENT

ರಾಜ್ಯ ಸರ್ಕಾರದ ವಿರುದ್ಧ ಆಯೋಗದ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:47 IST
Last Updated 7 ಫೆಬ್ರುವರಿ 2018, 19:47 IST

ಬೆಂಗಳೂರು: ‘ರಾಜ್ಯದ ವಿವಿಧ 218 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಹಲವು ವಾರ್ಡ್‌ಗಳ ಮರು ವಿಂಗಡಣೆ ಹಾಗೂ ಮೀಸಲು ಪಟ್ಟಿಯನ್ನೂ ಇನ್ನೂ ಒದಗಿಸಿಲ್ಲ’ ಎಂದು ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಸರ್ಕಾರದ ವಿರುದ್ಧವೇ ಚುನಾವಣಾ ಆಯೋಗ ಅರ್ಜಿ ಸಲ್ಲಿಸಿರುವ ಬಗ್ಗೆ ನ್ಯಾಯಪೀಠ ಅಚ್ಚರಿ ಹಾಗೂ ಬೇಸರ ವ್ಯಕ್ತಪಡಿಸಿತು. ‘ಇದೊಂದು ಗಂಭೀರ ವಿಚಾರ. ಪ್ರಕರಣದ ಕುರಿತು ಸರ್ಕಾರಿ ವಕೀಲರು ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಮಾಹಿತಿ ಪಡೆದು ಗುರುವಾರವೇ (ಫೆ.8) ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿದೆ.
‘ರಾಜ್ಯದ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಚುನಾವಣೆ ನಡೆಸಲು ಅನುವಾಗುವಂತೆ ರಾಜ್ಯ ಸರ್ಕಾರ ವಾರ್ಡ್ ಮರು ವಿಂಗಡಣೆ ಮಾಡಿ ಮತ್ತು ಮೀಸಲು ಕಲ್ಪಿಸಿದ ಪಟ್ಟಿಯನ್ನು ಆಯೋಗಕ್ಕೆ ನೀಡಬೇಕಿದೆ. ಆದರೆ, ಈ ಪಟ್ಟಿಯನ್ನು ಆಯೋಗಕ್ಕೆ ನೀಡಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ’ ಎಂದು ಆಯೋಗವು ಆರೋಪಿಸಿದೆ.
‘ಈಗಾಗಲೇ 215 ಕ್ಷೇತ್ರಗಳಿಗೆ ಮೀಸಲು ಪಟ್ಟಿ ನೀಡಲಾಗಿದೆ. ಉಳಿದ 3 ಕ್ಷೇತ್ರಗಳ ಮೀಸಲು ಪಟ್ಟಿ ನೀಡಬೇಕು ಹಾಗೂ 18 ಕ್ಷೇತ್ರಗಳ ವಾರ್ಡ್ ಮರು ವಿಂಗಡಣೆ ಪಟ್ಟಿ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಆಯೋಗ ಕೋರಿಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.