ADVERTISEMENT

ಸ್ಥಳ ಪರಿಶೀಲನೆಗೆ ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:48 IST
Last Updated 7 ಫೆಬ್ರುವರಿ 2018, 19:48 IST

ಬೆಂಗಳೂರು: ‘ಅಮರ್‌ಜ್ಯೋತಿ ಗೃಹ ನಿರ್ಮಾಣ ಸಹಕಾರ ಸಂಘವು ನಗರದ ದೊಮ್ಮಲೂರು ಒಂದನೇ ಹಂತದಲ್ಲಿ ರಚಿಸಿರುವ ಲೇ ಔಟ್‌ನ ಸ್ಥಳ ಪರಿಶೀಲನೆ ನಡೆಸಿ ನಾಲ್ಕು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಿ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹೈಕೋರ್ಟ್ ನಿರ್ದೇಶಿಸಿದೆ.
‘ಸಂಘವು ಸದಸ್ಯರಿಗೆ ಸೂಕ್ತವಾಗಿ ನಿವೇಶನ ಹಂಚಿಕೆ ಮಾಡಿಲ್ಲ’ ಎಂದು ಆರೋಪಿಸಿ ಮಹಾಲಕ್ಷ್ಮೀ ಲೇ ಔಟ್ ನಿವಾಸಿ ಟಿ.ರಘುಶಂಕರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎನ್.ಸತ್ಯಾನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಬಿಡಿಎ ಸಲ್ಲಿಸಿರುವ ಆಕ್ಷೇಪಣೆಯಲ್ಲಿ, ‘ದೊಮ್ಮಲೂರು ಒಂದನೇ ಹಂತದಲ್ಲಿ ಸರ್ವೇ ನಂ.57ರಿಂದ 82ರ ನಡುವಿನ ಸುಮಾರು 44 ಎಕರೆ 22 ಗುಂಟೆ ಜಾಗದಲ್ಲಿ ಲೇ ಔಟ್ ರಚಿಸಲು ಅಮರ್‌ಜ್ಯೋತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಸಂಘವು ನಕ್ಷೆ ಮಂಜೂರಾತಿಗೆ ವಿರುದ್ಧವಾಗಿ ಲೇ ಔಟ್ ರಚಿಸಿದೆ. ಸದಸ್ಯರಿಗೆ ನಿವೇಶನ ಹಂಚಿಕೆ ಮಾಡುವ ಬದಲಿಗೆ ಸಾಫ್ಟ್‌ವೇರ್ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ’ ಎಂದು ತಿಳಿಸಿದೆ.

ಅರ್ಜಿದಾರರ ಆಕ್ಷೇಪ: ‘ನಾನು 1988ರಲ್ಲಿ ಸಂಘದ ಸದಸ್ಯನಾಗಿ ನಿವೇಶನ ಹಂಚಿಕೆಗೆ ಅರ್ಜಿ ಸಲ್ಲಿಸಿದ್ದೆ. ನಿಗದಿತ ಶುಲ್ಕವನ್ನೂ ಪಾವತಿ ಮಾಡಿದ್ದೇನೆ. ಆದರೆ, ಈವರೆವಿಗೂ ನನಗೆ ನಿವೇಶನ ಹಂಚಿಕೆ ಮಾಡಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT