ADVERTISEMENT

ಫೇಸ್‌ಬುಕ್‌ ಎಡವಟ್ಟು; ಪ್ರೇಯಸಿ ಎಂದವನ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 20:20 IST
Last Updated 7 ಫೆಬ್ರುವರಿ 2018, 20:20 IST

ಬೆಂಗಳೂರು: ಮದುವೆಯಾದ ಮಹಿಳೆಯೊಬ್ಬರ ಫೋಟೊವನ್ನು ತನ್ನ ಜತೆಗೆ ಹಾಕಿಕೊಂಡು, ಆಕೆಯೇ ತನ್ನ ಪ್ರೇಯಸಿ ಎಂದು ಫೇಸ್‌ಬುಕ್‌ ಖಾತೆಯಲ್ಲಿ ಸ್ಟೇಟಸ್‌ ಪ್ರಕಟಿಸಿದ್ದ ಪ್ರಶಾಂತ್‌ ಎಂಬುವರ ವಿರುದ್ಧ ಸಂತ್ರಸ್ತೆಯು ದೂರು ನೀಡಿದ್ದಾರೆ.

ಕಾಮಾಕ್ಷಿಪಾಳ್ಯದ ನಿವಾಸಿ ಪ್ರಶಾಂತ್, ಡ್ಯಾಡೀಸ್ ಗೇಮ್ಸ್ ಮೂಲಕ ವರ್ಷದ ಪ್ರೇಯಸಿ ಯಾರು ಎಂಬುದನ್ನು ಹುಡುಕಿದ್ದರು. ಆಗ ಮಹಿಳೆಯ ಹೆಸರು ಹಾಗೂ ಭಾವಚಿತ್ರ ಬಂದಿತ್ತು. ಅದನ್ನೇ ಅವರು ಶೇರ್‌ ಮಾಡಿ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು.

ಅದನ್ನು ನೋಡಿದ್ದ ಸ್ನೇಹಿತರು ಹಾಗೂ ಸಂಬಂಧಿಕರು ಮಹಿಳೆಗೆ ವಿಷಯ ತಿಳಿಸಿದ್ದರು. ಮುಜುುರಕ್ಕೆ ಒಳಗಾದ ಮಹಿಳೆಯು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು, ‘ದೂರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ADVERTISEMENT

ಆ್ಯಪ್‌ ಬಗ್ಗೆ ಎಚ್ಚರವಿರಲಿ: ‘ಫೆ. 14ರಂದು ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಅದಕ್ಕೆ ಕೆಲ ದಿನಗಳು ಬಾಕಿ ಇರುವಾಗಲೇ ಡ್ಯಾಡೀಸ್ ಗೇಮ್ಸ್‌ನಂಥ ಹಲವು ಆ್ಯಪ್‌ಗಳು, ‘ವರ್ಷದ ಪ್ರೇಯಸಿ ಯಾರು? ಹುಡುಕಿಕೊಳ್ಳಿ’ ಎಂಬ ಜಾಹೀರಾತು ‍ಪ್ರಕಟಿಸುತ್ತಿವೆ. ಈ ಬಗ್ಗೆ ಫೇಸ್‌ಬುಕ್‌ ಬಳಕೆದಾರರು ಎಚ್ಚರವಾಗಿರಬೇಕು’ ಎಂದು ಸೈಬರ್‌ ಕ್ರೈಂ ಪೊಲೀಸರು ತಿಳಿಸಿದರು.

‘ಜಾಹೀರಾತಿನ ಲಿಂಕ್‌ ಬಳಸಿ ಯಾರದ್ದೂ ಫೋಟೊ ಪ್ರಕಟಿಸುವುದು ಅಪರಾಧ. ಇಂಥ ವರ್ತನೆಯಿಂದ ಮಹಿಳೆಯರು ತೊಂದರೆಗೆ ಸಿಲುಕಲಿದ್ದಾರೆ. ಒಪ್ಪಿಗೆ ಇಲ್ಲದೆ ಫೋಟೊ ಪ್ರಕಟಿಸಿದರೆ ಸಂತ್ರಸ್ತ ಮಹಿಳೆಯರು ದೂರು ನೀಡಬಹುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.