ADVERTISEMENT

‘ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಬೇಡಿ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 20:25 IST
Last Updated 7 ಫೆಬ್ರುವರಿ 2018, 20:25 IST
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರ್ಮಿಕರು –ಪ್ರಜಾವಾಣಿ ಚಿತ್ರ
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರ್ಮಿಕರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮ್ಯಾನ್‌ಹೋಲ್‌, ಎಸ್‌ಟಿಪಿ ಹಾಗೂ ಸೆಪ್ಟಿಕ್ ಟ್ಯಾಂಕ್‌ಗಳ ಸ್ವಚ್ಛತೆಗಾಗಿ ಮಾನವರನ್ನು ಇಳಿಸಬಾರದು ಎಂದು ಒತ್ತಾಯಿಸಿ ನೂರಾರು ಕಾರ್ಮಿಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸಿಪಿಐಎಂ ಹಾಗೂ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿ
ಗಳು, ಹೋರಾಟಗಾರರು, ಗುತ್ತಿಗೆ ಪೌರಕಾರ್ಮಿಕರು, ಜಲಮಂಡಳಿ ಗುತ್ತಿಗೆ ಕಾರ್ಮಿಕರು ಭಾಗವಹಿಸಿದ್ದರು.
ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಮೆರವಣಿಗೆ ನಡೆಯಿತು.

ರಾಜ್ಯದಲ್ಲಿ ಮಲ ಹೊರುವ ಪದ್ಧತಿಯಿಂದ 2008ರಿಂದ ಇಲ್ಲಿಯವರೆಗೆ 70 ಮಂದಿ ಸತ್ತಿದ್ದಾರೆ. ಈ ಪದ್ಧತಿ ನಿಷೇಧವಾಗಿದ್ದರೂ ಪ್ರಕರಣ
ಗಳು ದಾಖಲಾಗುತ್ತಲೇ ಇವೆ. ಅದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಸಿಪಿಎಂಎಲ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಲಿಫ್ಟನ್ ರೊಜಾರಿಯೋ, ‘ಚಂದ್ರಗ್ರಹಕ್ಕೆ ಉಪಗ್ರಹಗಳನ್ನು ಕಳುಹಿಸುವ ತಂತ್ರಜ್ಞಾನ ಹೊಂದಿರುವ ನಮ್ಮ ಬಳಿ ಮ್ಯಾನ್‌ಹೋಲ್‌, ಸೆಪ್ಟಿಕ್ ಟ್ಯಾಂಕ್ ಶುಚಿಗೆ ತಂತ್ರಜ್ಞಾನ ಇಲ್ಲದಿರುವುದು ವಿಪರ್ಯಾಸವೇ ಸರಿ’ ಎಂದರು.

ಬೆಂಗಳೂರು ಜಲ ಮಂಡಳಿ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯ ಸತೀಶ್, ‘ಜಲಮಂಡಳಿಯ ಅಧೀನದಲ್ಲಿ 38 ಸೆಪ್ಟಿಕ್ ಟ್ಯಾಂಕ್‌ಗಳಿವೆ. ಅವುಗಳ ಸ್ವಚ್ಛತೆಗೆ ಕಾರ್ಮಿಕರನ್ನೇ ಬಳಸಲಾಗುತ್ತಿದೆ. ಈ ಬಗ್ಗೆ ಸಫಾಯಿ ಕರ್ಮಚಾರಿ ಆಯೋಗಕ್ಕೆ ದೂರು ನೀಡಲಾಗಿದೆ’ ಎಂದು ಹೇಳಿದರು.

ಹೊರುವ ಪದ್ಧತಿ ಇನ್ನೂ ಜೀವಂತವಾಗಿರಲು ಜಾತಿಯೇ ಮೂಲ ಕಾರಣ. ಮೊದಲು ಅದನ್ನು ನಾಶಮಾಡಬೇಕು
-ನಿರ್ಮಲಾ, ಗುತ್ತಿಗೆ ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ

ಪ್ರತಿಭಟನಾಕಾರರ ಹಕ್ಕೊತ್ತಾಯಗಳು

- ಮಲಹೊರುವ ಪದ್ಧತಿಯಿಂದ ತೊಂದರೆಗೆ ಸಿಲುಕಿದವರಿಗೆ ಪುನರ್ವಸತಿ ಕಲ್ಪಿಸಲು ಬಜೆಟ್‌ನಲ್ಲಿ ಹಣ ಮೀಸಲಿಡಬೇಕು

-ಕಾರ್ಮಿಕರು ಸಾವಿಗೆ ಅಧಿಕಾರಿಗಳನ್ನು ಹೊಣೆಯಾಗಿಸಬೇಕು

-ಮೃತರ ಕುಟುಂಬಸ್ಥರಿಗೆ ₹50 ಲಕ್ಷ ಪರಿಹಾರ ನೀಡಬೇಕು

- ಮಲಹೊರುವ ಪದ್ಧತಿ ಕೊನೆಗಾಣಿಸಲು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.