ADVERTISEMENT

ಚಿಕ್ಕಮ್ಮನ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 20:07 IST
Last Updated 8 ಫೆಬ್ರುವರಿ 2018, 20:07 IST

ಬೆಂಗಳೂರು: ಹಣಕ್ಕಾಗಿ ಪೀಡಿಸಿ ಚಿಕ್ಕಮ್ಮನನ್ನು ಕೊಲೆ ಮಾಡಿದ್ದ ಅಪರಾಧಿ ಚಿನ್ನಮಾಲ ಕೊಂಡಾರೆಡ್ಡಿ (45) ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ₹8,000 ದಂಡ ವಿಧಿಸಿ 63ನೇ ಸಿಸಿಎಚ್‌ ನ್ಯಾಯಾಲಯವು ಬುಧವಾರ ಆದೇಶ ಹೊರಡಿಸಿದೆ.

2014ರ ಜನವರಿ 27ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ, ಈ ಆದೇಶ ಹೊರಡಿಸಿದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಟಿ.ಎಂ.ನರೇಂದ್ರ ವಾದಿಸಿದ್ದರು.

‘ಚಿನ್ನಮಾಲ ಆಂಧ್ರಪ್ರದೇಶದ ನೆಲ್ಲೂರಿನವ. ಮಹದೇವಪುರ ಠಾಣೆ ವ್ಯಾಪ್ತಿಯ ಬಿ.ನಾರಾಯಣಪುರದ ಗುರುಮೂರ್ತಿ ಬಡಾವಣೆಯಲ್ಲಿ ಆತನ ಚಿಕ್ಕಮ್ಮ ಕೊಂಡಮ್ಮ (65) ವಾಸವಿದ್ದರು. ಆಗಾಗ ಅವರ ಮನೆಗೆ ಹೋಗುತ್ತಿದ್ದ ಆತ, ಹಣ ನೀಡುವಂತೆ ಪೀಡಿಸುತ್ತಿದ್ದ. ಅಕ್ಕನ ಮಗನಾಗಿದ್ದರಿಂದ, ಆರಂಭದಲ್ಲಿ ಕೊಂಡಮ್ಮ ಹಣ ಕೊಟ್ಟು ಕಳುಹಿಸುತ್ತಿದ್ದರು. ಆತನ ಕಾಟ ಹೆಚ್ಚಾದಾಗ, ಹಣ ಕೊಡಲು ನಿರಾಕರಿಸಿದ್ದರು’ ಎಂದು ನರೇಂದ್ರ ತಿಳಿಸಿದರು.

ADVERTISEMENT

ಜ. 27ರಂದು ರಾತ್ರಿ ಕೊಂಡಮ್ಮ ಅವರ ಮನೆಗೆ ಹೋಗಿದ್ದ ಅಪರಾಧಿ, ಹಣ ಕೊಡದಿದ್ದಕ್ಕೆ ಜಗಳ ತೆಗೆದಿದ್ದ. ಕೈಗಳಿಂದ ಹಲ್ಲೆ ಮಾಡಿದ್ದ. ಕುಸಿದು ಬಿದ್ದಿದ್ದ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಮೈಮೇಲಿದ್ದ ಚಿನ್ನದ ಆಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ. ಮರುದಿನ ಕೊಂಡಮ್ಮ ಅವರ ಮಗ ಶ್ರೀನಿವಾಸ್‌, ಮನೆಗೆ ಬಂದಾಗ ವಿಷಯ ಗೊತ್ತಾಗಿತ್ತು. ಬಳಿಕವೇ ಮಹದೇವಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದರು.

ಚಿನ್ನಾಭರಣವನ್ನು ನೆಲ್ಲೂರಿನ ವ್ಯಾ‍ಪಾರಿಯೊಬ್ಬರ ಬಳಿ ಗಿರವಿ ಇಟ್ಟಿದ್ದ ಅಪರಾಧಿ, ಅದರಿಂದ ಬಂದ ₹70 ಸಾವಿರ ತೆಗೆದುಕೊಂಡು ತಲೆ
ಮರೆಸಿಕೊಂಡು ಓಡಾಡುತ್ತಿದ್ದ. ತನಿಖಾಧಿಕಾರಿ ಇನ್‌ಸ್ಪೆಕ್ಟರ್‌ ಗೌತಮ್‌, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.