ADVERTISEMENT

‘ಕೆಸಿಡಿಸಿ ಮುಚ್ಚಿ; ಸ್ವಚ್ಛ ಉಸಿರಾಟ ಕಲ್ಪಿಸಿ’

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 20:18 IST
Last Updated 11 ಫೆಬ್ರುವರಿ 2018, 20:18 IST
ಘಟಕ ಮುಚ್ಚುವಂತೆ ಒತ್ತಾಯಿಸಿ ಮಾನವ ಸರಪಳಿ ರಚಿಸಿದ ವಿದ್ಯಾರ್ಥಿಗಳು
ಘಟಕ ಮುಚ್ಚುವಂತೆ ಒತ್ತಾಯಿಸಿ ಮಾನವ ಸರಪಳಿ ರಚಿಸಿದ ವಿದ್ಯಾರ್ಥಿಗಳು   

ಬೆಂಗಳೂರು: ಕೂಡ್ಲು ಬಳಿ ಇರುವ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಘಟಕವನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಭಾನುವಾರ ಮಾನವ ಸರಪಳಿ ರಚಿಸಿದರು.

‘ಕೂಡ್ಲು ಗೇಟ್‌, ಹರಳೂರು, ಹರಳುಕುಂಟೆ, ಸೋಮಸುಂದರಪಾಳ್ಯ ಮತ್ತು ಪರಂಗಿಪಾಳ್ಯ (ಕೆಎಚ್‌ಎಚ್‌ಎಸ್‌ಪಿ) ನಿವಾಸಿಗಳ ಕ್ರಿಯಾ ಸಮಿತಿ’ಯ ನೇತೃತ್ವದಲ್ಲಿ ಕೆಸಿಡಿಸಿಯಿಂದ ಎಚ್‌ಎಸ್‌ಆರ್‌ ಬಡಾವಣೆಯ 2ನೇ ಹಂತದ 27ನೇ ಮುಖ್ಯರಸ್ತೆಯ ಕೆಇಬಿ ಜಂಕ್ಷನ್‌ನ ವೇಮನ ವೃತ್ತದವರೆಗೆ ಮಾನವ ಸರಪಳಿ ರಚಿಸಲಾಯಿತು.

ಬೆಳಿಗ್ಗೆ 9ಕ್ಕೆ ಕೆಸಿಡಿಸಿ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರು ಒಬ್ಬರನ್ನೊಬ್ಬರು ಕೈಕೈ ಹಿಡಿದು ಮಾನವ ಸರಪಳಿ ರಚಿಸಿದರು. ‘ಸ್ವಚ್ಛ ಉಸಿರಾಟ ನಮ್ಮ ಹಕ್ಕು’, ‘ಕೆಸಿಡಿಸಿ ಮುಚ್ಚಿರಿ’, ‘ಸ್ವಚ್ಛ ಎಚ್‍ಎಸ್‍ಆರ್ ಬೇಕು’ ಎಂಬ ಫಲಕಗಳನ್ನು ಪ್ರದರ್ಶಿಸಿದರು. ಜತೆಗೆ ಸಹಿ ಸಂಗ್ರಹ ಅಭಿಯಾನವನ್ನೂ ನಡೆಸಿದರು.

ADVERTISEMENT

‘ಘಟಕದಿಂದ ಹೊರಸೂಸುವ ದುರ್ವಾಸನೆಯಿಂದ ನಮ್ಮ ನೆಮ್ಮದಿ ಹಾಳಾಗಿದೆ. ಕೂಡ್ಲು, ಎಚ್‍ಎಸ್‍ಆರ್ ಬಡಾವಣೆ, ಹರಳೂರು ಮತ್ತು ಸೋಮಸುಂದರಪಾಳ್ಯ ಭಾಗದವರೆಗೂ ದುರ್ವಾಸನೆ ಬೀರುತ್ತಿದೆ. ರೋಗಿಗಳು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗುತ್ತಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಈ ಪ್ರದೇಶದ ಅಂತರ್ಜಲ ಹಾಗೂ ಗಾಳಿ ಕಲುಷಿತಗೊಂಡಿದೆ. ಘಟಕವನ್ನು ಕೂಡಲೇ ಮುಚ್ಚಬೇಕು’ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.

‘ಈ ಘಟಕವು 75 ಟನ್‌ ಕಸವನ್ನು ಗೊಬ್ಬರವನ್ನಾಗಿ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ, 200 ಟನ್‌ಗಿಂತ ಹೆಚ್ಚಿನ ಕಸವನ್ನು ಇಲ್ಲಿಗೆ ಸಾಗಿಸಲಾಗುತ್ತಿದೆ. ತ್ಯಾಜ್ಯ ರಸವನ್ನು (ಲಿಚೆಟ್‌) ಸೋಮಸುಂದರಪಾಳ್ಯ ಕೆರೆಗೆ ಹರಿಸಲಾಗುತ್ತಿದ್ದು, ಅದರ ಒಡಲು ಕಲುಷಿತಗೊಂಡಿದೆ. ಘಟಕ ಸ್ಥಗಿತಗೊಳಿ‌ಸುವಂತೆ 2015ರಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕೆಎಚ್‌ಎಚ್‌ಎಸ್‌ಪಿ ನಿವಾಸಿಗಳ ಕ್ರಿಯಾ ಸಮಿತಿಯ ಖಜಾಂಚಿ ಲಲಿತಾಂಬಾ ದೂರಿದರು.

ಕೆಸಿಡಿಸಿ ಮಾಜಿ ಅಧ್ಯಕ್ಷ ಆನಂದ್‌ ಕುಮಾರ್, ‘ಘಟಕದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕಸವನ್ನು ಇಲ್ಲಿಗೆ ಸಾಗಿಸುತ್ತಿರುವುದು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಸಮಸ್ಯೆ ತಲೆದೋರಿದೆ. ಇದರಿಂದ ನಿವಾಸಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಘಟಕದ ಅಧ್ಯಕ್ಷನಾಗಿದ್ದ ವೇಳೆ ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ವರದಿ ನೀಡಿದ್ದೆ. ಘಟಕದಿಂದ ಕೆರೆಗೆ ತ್ಯಾಜ್ಯ ರಸವನ್ನು ಬಿಡುತ್ತಿಲ್ಲ. ಕೆಲವರು ಕೋಳಿ ತ್ಯಾಜ್ಯ ಸುರಿಯುತ್ತಿದ್ದಾರೆ’ ಎಂದು ತಿಳಿಸಿದರು.

‘ಮಾನವ ಸರಪಳಿ ರಚನೆ ದುರುದ್ದೇಶಪೂರಕ’

ಘಟಕದಿಂದ ದುರ್ವಾಸನೆ ಬರದಂತೆ ತಡೆಗಟ್ಟಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ವಾಸನೆ ಬರದಂತೆ ರಾಸಾಯನಿಕ ದ್ರಾವಣಗಳನ್ನು ಸಿಂಪಡಿಸಲಾಗುತ್ತಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಕಸ ಬರುತ್ತಿದೆ ಎಂಬ ಹೇಳಿಕೆಯಲ್ಲಿ ಹುರುಳಿಲ್ಲ. ತ್ಯಾಜ್ಯ ರಸವನ್ನು ಕೆರೆಗೆ ಬಿಟ್ಟಿಲ್ಲ. ಘಟಕ ಮುಚ್ಚುವಂತೆ ಕೆಲವರು ದುರುದ್ದೇಶದಿಂದ ಒತ್ತಾಯಿಸುತ್ತಿದ್ದಾರೆ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ಪ್ರತಿಕ್ರಿಯಿಸಿದರು.

* ಎಚ್‍ಎಸ್‍ಆರ್ ಬಡಾವಣೆ ಸುತ್ತಲಿನ ಶಾಲೆಗಳ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ. ಮಕ್ಕಳಿಗೆ ಮುಖಗವಸು ಹಾಕಿ ಕಳುಹಿಸುತ್ತಿದ್ದೇವೆ. ಮಳೆಗಾಲದಲ್ಲಿ ದುರ್ವಾಸನೆ ವಿಪರೀತ.

–ಶಿವಕುಮಾರ್‌, ಹರಳೂರು ನಿವಾಸಿ

* ಈ ಭಾಗದ ಕೊಳವೆಬಾವಿಗಳಲ್ಲಿ ಗಡುಸು ನೀರು ಬರುತ್ತಿದೆ. ಕೆಲವೆಡೆ ಹಳದಿ ಬಣ್ಣದ ನೀರು ಬರುತ್ತಿದೆ. ಕಲುಷಿತ ನೀರಿನ ಸೇವನೆಯಿಂದ ರೋಗಗಳು ಬರುತ್ತಿವೆ.

–ಲೋಕೇಶ್ ರೆಡ್ಡಿ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.