ADVERTISEMENT

‘ಸಂತೋಷ್ ಕೊಲೆಗೆ ಬಳಸಿದ್ದು ಚಾಕು’

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 20:36 IST
Last Updated 11 ಫೆಬ್ರುವರಿ 2018, 20:36 IST
ಸಂತೋಷ್
ಸಂತೋಷ್   

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಕೆ.ಸಂತೋಷ್‌ (28) ಅವರನ್ನು ಕೊಲ್ಲಲು ಬಳಸಿದ್ದ ಚಾಕು, ಆರೋಪಿಗಳ ಸ್ನೇಹಿತನ ಮನೆ ಚಾವಣಿಯಲ್ಲಿ ಪತ್ತೆಯಾಗಿದೆ.

ಸಂತೋಷ್‌ ತೊಡೆಗೆ ಸ್ಕ್ರೂ ಡ್ರೈವರ್‌ನಿಂದ ಚುಚ್ಚಿದ್ದಾಗಿ ಆರೋಪಿಗಳು ಆರಂಭದಲ್ಲಿ ಹೇಳಿಕೆ ಕೊಟ್ಟಿದ್ದರು. ಇದೀಗ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳ‍ಪಡಿಸಿದಾಗ, ‘ಸಂತೋಷ್ ಜತೆ ಮೊದಲಿನಿಂದಲೂ ವೈರತ್ವ ಇತ್ತು. ಗಾಂಜಾ ಸೇದುತ್ತಿದ್ದ ಕಾರಣಕ್ಕೆ ಇತ್ತೀಚೆಗೆ ಎಲ್ಲರೆದುರು ನಮಗೆ ಬೈದಿದ್ದ. ಆ ಕಾರಣಕ್ಕೆ ಚಾಕುವಿನಿಂದ ತೊಡೆಗೆ ಇರಿದಿದ್ದೆವು’ ಎಂದು ಹೇಳಿಕೆ ನೀಡಿದ್ದಾರೆ.

ಮಹಜರು ಪ್ರಕ್ರಿಯೆ ಪೂರ್ಣಗೊಳಿಸಲು ಆರೋಪಿಗಳನ್ನು ಶನಿವಾರ ಚಿನ್ನಪ್ಪ ಗಾರ್ಡನ್‌ಗೆ ಕರೆದೊಯ್ದಿದ್ದ ಪೊಲೀಸರು, ಮನೆಯೊಂದರ ಚಾವಣಿ ಮೇಲಿದ್ದ ಚಾಕುವನ್ನು ಜಪ್ತಿ ಮಾಡಿದ್ದಾರೆ. ‘ಆ ಮನೆಯ ಮಾಲೀಕ ಆರೋಪಿಗಳ ಸ್ನೇಹಿತ. ಹೀಗಾಗಿ ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಸಾಕ್ಷ್ಯ ನಾಶಕ್ಕೆ ಹಂತಕರಿಗೆ ನೆರವಾಗಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಚಿನ್ನಪ್ಪ ಗಾರ್ಡನ್‌ನಲ್ಲಿ ಜ.31ರಂದು ಸಂತೋಷ್ ಹತ್ಯೆ ನಡೆದಿತ್ತು. ಈ ಸಂಬಂಧ ಕಾಂಗ್ರೆಸ್‌ನ ಜೆ.ಸಿ.ನಗರ ಬ್ಲಾಕ್‌ ಅಧ್ಯಕ್ಷ ಖಾದರ್‌ ಅವರ ಮಗ ವಾಸೀಂ, ಫಿಲಿಪ್ಸ್, ಇರ್ಫಾನ್ ಹಾಗೂ ಉಮರ್ ಎಂಬುವರನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದರು. ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್ ಅವರು ಪ್ರಕರಣದ ಮುಂದಿನ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿದ್ದರು.

‘ಸ್ಕ್ರೂಡ್ರೈವರ್’ ಎಂದಿದ್ದ ಗೃಹಸಚಿವರು

ಹತ್ಯೆ ನಡೆದ ದಿನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಗೃಹಸಚಿವ ರಾಮಲಿಂಗಾರೆಡ್ಡಿ, ‘ಆರೋಪಿಗಳು ವೈಯಕ್ತಿಕ ದ್ವೇಷದಿಂದ ಸಂತೋಷ್‌ಗೆ ಸ್ಕ್ರೂಡ್ರೈವ್‌ನಿಂದ ಚುಚ್ಚಿದ್ದಾರೆ. ಕೊಲ್ಲುವ ಉದ್ದೇಶ ಅವರಿಗೆ ಇರಲಿಲ್ಲ. ಅದೇ ಉದ್ದೇಶವಿದ್ದಿದ್ದರೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿದ್ದರು’ ಎಂದಿದ್ದರು.

ಈ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದ ಬಿಜೆಪಿ ಕಾರ್ಯಕರ್ತರು, ಗೃಹಸಚಿವರಿಗೆ ಸ್ಕ್ರೂಡ್ರೈವರ್‌ಗಳನ್ನು ಕೊರಿಯರ್ ಮಾಡುವ ಮೂಲಕ ಅಭಿಯಾನ ನಡೆಸಿದ್ದರು. ‘ಸಚಿವರು ಸ್ಕ್ರೂಡ್ರೈವರ್ ನೋಡಿದಾಗಲೆಲ್ಲ ಸಂತೋಷ್‌ನೇ ನೆನಪಾಗಬೇಕು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.