ADVERTISEMENT

ವಕೀಲರ ಸಂಘದ ಚುನಾವಣೆಯಲ್ಲಿ ಅಕ್ರಮ ಆರೋಪ

ವಿವರ ಒದಗಿಸಲು ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 19:35 IST
Last Updated 19 ಫೆಬ್ರುವರಿ 2018, 19:35 IST

ಬೆಂಗಳೂರು: ‘ಬೆಂಗಳೂರು ವಕೀಲರ ಸಂಘದ ಆಡಳಿತ ಮಂಡಳಿಗೆ ಕಳೆದ ತಿಂಗಳು 21ರಂದು ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು ಇದನ್ನು ಅಸಿಂಧು ಎಂದು ಘೋಷಿಸಬೇಕು’ ಎಂದು ಕೋರಿ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅಸಲು ದಾವೆ ಹೂಡಲಾಗಿದೆ.

ಈ ಕುರಿತ ಅರ್ಜಿಯನ್ನು 12ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶ ಶುಭವೀರ್ ಜೈನ್‌ ವಿಚಾರಣೆ ನಡೆಸಿ, ‘ಚುನಾವಣೆಯಲ್ಲಿ ಉಪಯೋಗಿಸಿದ ಬ್ಯಾಲೆಟ್ ಪೇಪರ್‌, 29 ಟೇಬಲ್‌ಗಳ ಮತ ಎಣಿಕೆಯ ಪ್ರತಿ ಸುತ್ತಿನ ಸಿಸಿಟಿವಿ ದೃಶ್ಯಾವಳಿಗಳನ್ನು ಏಳು ದಿನಗಳ ಒಳಗಾಗಿ ಕೋರ್ಟ್‌ ವಶಕ್ಕೆ ನೀಡಬೇಕು’ ಎಂದು ಆದೇಶಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಿಸಿಕೊಳ್ಳಲಾಗಿರುವ ಮತದಾನ ಪ್ರಕ್ರಿಯೆಯ ಸಂಪೂರ್ಣ ದೃಶ್ಯಾವಳಿಗಳನ್ನು ಕೋರ್ಟ್‌ ವಶಕ್ಕೆ ನೀಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

‘ನಾನು ನಗರ ವಿಭಾಗದ ಕಾರ್ಯಕಾರಿ ಸಮಿತಿ ವಿಭಾಗಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ, ನಾಲ್ಕು ಮತಗಳ ಅಂತರದಿಂದ ಸೋತಿದ್ದೇನೆ. ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಈ ಅಕ್ರಮಗಳೆಲ್ಲಾ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಆದ್ದರಿಂದ ಈ ಚುನಾವಣೆಯನ್ನು ಅಸಿಂಧು ಎಂದು ಘೋಷಿಸಬೇಕು’ ಎಂದು ಕೋರಿ ವಕೀಲೆ ಪಿ.ಕೆ.ಸ್ವಪ್ನಾ ಈ ಅರ್ಜಿ ಸಲ್ಲಿಸಿದ್ದಾರೆ.

ಎನ್.ಜಯಕುಮಾರ್ ಅರ್ಜಿದಾರರ ಪರ ವಾದ ಮಂಡಿಸಿದರು.

ಪ್ರಕರಣದಲ್ಲಿ, ಮುಖ್ಯ ಚುನಾವಣಾ ಅಧಿಕಾರಿ, ಬೆಂಗಳೂರು ವಕೀಲರ ಸಂಘ, ಮಂಜುನಾಥ ಬಿ.ಗೌಡ, ಸಿ.ಎಸ್‌.ಕಾಂತರಾಜು, ಮುನಿಯಪ್ಪ ಸಿ.ಆರ್‌.ಗೌಡ, ಆರ್.ರಮೇಶ್, ಆರ್.ಎಸ್‌.ಜಯಶ್ರೀ, ಜಿ.ನಾರಾಯಣ ಸ್ವಾಮಿ, ಜೆ.ಮಮತಾ, ಎನ್‌.ವಿ.ಹರೀಶ್‌, ವಿ.ಭಾಗೀರಥಿ, ಕೆ.ದೇವರಾಜ್ ಹಾಗೂ ಸಿ.ಎಸ್.ಗಿರೀಶ್ ಕುಮಾರ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.