ADVERTISEMENT

ಮೈಸೂರಿನಲ್ಲಿ ಕಲೆ–ಪರಂಪರೆ ಸಂರಕ್ಷಣೆಗೆ ಕೇಂದ್ರ

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪ್ರತಿಷ್ಠಾನದ ಅಧ್ಯಕ್ಷೆ ಪ್ರಮೋದಾ ದೇವಿ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 19:42 IST
Last Updated 19 ಫೆಬ್ರುವರಿ 2018, 19:42 IST
ಮೈಸೂರಿನಲ್ಲಿ ಕಲೆ–ಪರಂಪರೆ ಸಂರಕ್ಷಣೆಗೆ ಕೇಂದ್ರ
ಮೈಸೂರಿನಲ್ಲಿ ಕಲೆ–ಪರಂಪರೆ ಸಂರಕ್ಷಣೆಗೆ ಕೇಂದ್ರ   

ಬೆಂಗಳೂರು: ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆ ಸಂರಕ್ಷಿಸಲು ಮೈಸೂರಿನಲ್ಲಿ ಕಲಾ ಸಂರಕ್ಷಣಾ ಕೇಂದ್ರ ಮತ್ತು ಶ್ರೇಷ್ಠತಾ ಕೇಂದ್ರ ಸ್ಥಾಪಿಸಲು ಉದ್ದೇಶಿ ಸಲಾಗಿದೆ ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪ್ರತಿಷ್ಠಾನದ ಅಧ್ಯಕ್ಷೆ  ಪ್ರಮೋದಾ ದೇವಿ ಒಡೆಯರ್‌ ತಿಳಿಸಿದರು.

ಸೋಮವಾರ ನಡೆದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪ್ರತಿಷ್ಠಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಒಡೆಯರ್‌ 65ನೇ ಹುಟ್ಟುಹಬ್ಬದ ನೆನಪಿನಾರ್ಥ ಮೈಸೂರು ರಾಜಮನೆತನವು ಸ್ಥಾಪಿಸಿರುವ ಪ್ರತಿಷ್ಠಾನವು ಟ್ರಾನ್ಸ್‌ ಡಿಸಿಪ್ಲಿನರಿ ಯುನಿರ್ವಸಿಟಿ (ಟಿಡಿಯು) ಸಹಯೋಗದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ಕೇಂದ್ರವನ್ನೂ ಆರಂಭಿಸುವ ಉದ್ದೇಶ ಹೊಂದಿದೆ ಎಂದರು.

ADVERTISEMENT

‘ಒಡೆಯರ್‌ ನಾಲ್ಕು ಬಾರಿ ಸಂಸದರಾದರೂ ಅಧಿಕಾರವನ್ನು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳಲಿಲ್ಲ. 2012ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆ ಪುನರುಜ್ಜೀವನಗೊಳಿಸುವ ಯೋಜನೆ ಕೈಗೆತ್ತಿಕೊಂಡಿದ್ದರು. ಇದು ಅವರ ಕನಸಾಗಿತ್ತು. ಆದರೆ, ಪೂರ್ಣವಾಗುವ ಮೊದಲೇ ಅಕಾಲಿಕ ಸಾವಿಗೆ ತುತ್ತಾದರು. ಇಂದು ಅವರು ನಮ್ಮ ಜತೆ ಭೌತಿಕವಾಗಿ ಇಲ್ಲದಿದ್ದರೂ ಅವರ ನೆನಪು ನಮಗೆ ಸದಾ ಪ್ರೇರಕ ಶಕ್ತಿಯಾಗಿರುತ್ತದೆ. ಜಗನ್ಮೋಹನ ಅರಮನೆ ನವೀಕರಣ ಪೂರ್ಣಗೊಳಿಸಿ ಅವರ ಕನಸು ಸಾಕಾರಗೊಳಿಸುತ್ತೇವೆ’ ಎಂದರು.

ಟಿಡಿಯು ಪ್ರತಿ ವರ್ಷ ಫೆ.19ರಂದು ಒಡೆಯರ್‌ ಜನ್ಮದಿನವನ್ನು ಭಾರತೀಯ ಪಾರಂಪಾರಿಕ ವೈದ್ಯ ಗ್ರಂಥಾಲಯ ದಿನವನ್ನಾಗಿ ಆಚರಿಸಲಿದೆ. ಅಲ್ಲದೆ, ಗ್ರಂಥಾಲಯಕ್ಕೆ ಅವರ ಗೌರವಾರ್ಥ ‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪಾರಂಪಾರಿಕ ವೈದ್ಯಕೀಯ ಗ್ರಂಥಾಲಯ’ವೆಂದು ನಾಮಕರಣ ಮಾಡಿದೆ ಎಂದು ಟಿಡಿಯು ಕುಲಪತಿ ಪ್ರೊ.ದರ್ಶನ್‌ ಶಂಕರ್‌ ತಿಳಿಸಿದರು.

ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಮಾತನಾಡಿ, ‘ಇಂದು ಸಮಾಜದಲ್ಲಿ ಸತ್ಯ, ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಸಮಾಜ ಹಣ ಮತ್ತು ಅಧಿಕಾರ ಬಲಕ್ಕೆ ಮಣೆ ಹಾಕುತ್ತಿದೆ. ಜನರಲ್ಲಿ ನೈತಿಕ ಪ್ರಜ್ಞೆ ಬೆಳೆಸುವ ಮತ್ತು ಭ್ರಷ್ಟಾಚಾರವನ್ನು ಬೇರು ಸಮೇತ ಮೂಲೋತ್ಪಾಟನೆ ಮಾಡುವ ತುರ್ತು ಅಗತ್ಯ ಇದೆ. ಶುದ್ಧ ರಾಜಕಾರಣ ಬಿತ್ತಿ ಬೆಳೆಸುವ ಕೆಲಸವನ್ನು ಪ್ರತಿಷ್ಠಾನ ಆರಂಭಿಸಲಿರುವ ರಾಜ್ಯಶಾಸ್ತ್ರ ಅಧ್ಯಯನ ಕೇಂದ್ರದಿಂದ ಆಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಪ್ರತಿಷ್ಠಾನಕ್ಕೆ ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಚಾಲನೆ ನೀಡಿದರು

***

ಭಾರತೀಯ ಅಧ್ಯಾತ್ಮ ಇಡೀ ಜಗತ್ತಿನ ಕ್ಷೇಮ ಬಯಸುತ್ತದೆ. ನಮ್ಮ ಪರಂಪರೆ, ಆಚರಣೆಗಳನ್ನು ಎಲ್ಲರೂ ಗೌರವಿಸಬೇಕು
- ಶ್ರೀ ‘ಎಂ’, ಆಧ್ಯಾತ್ಮ ಗುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.