ADVERTISEMENT

ಫಾಸ್ಟ್‌ ಚಾರ್ಜಿಂಗ್‌ ಕೇಂದ್ರಕ್ಕೆ ಚಾಲನೆ

ವಿದ್ಯುತ್‌ ಚಾಲಿತ ವಾಹನಗಳಿಗಾಗಿ 11 ಕೇಂದ್ರಗಳು ಆರಂಭ: ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 19:49 IST
Last Updated 19 ಫೆಬ್ರುವರಿ 2018, 19:49 IST
ಫಾಸ್ಟ್‌ ಚಾರ್ಜಿಂಗ್‌ ಕೇಂದ್ರಕ್ಕೆ ಚಾಲನೆ
ಫಾಸ್ಟ್‌ ಚಾರ್ಜಿಂಗ್‌ ಕೇಂದ್ರಕ್ಕೆ ಚಾಲನೆ   

ಬೆಂಗಳೂರು: ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ನಿರ್ಮಾಣವಾಗಿರುವ ವಿದ್ಯುತ್‌ ಚಾಲಿತ ವಾಹನ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸೋಮವಾರ ಚಾಲನೆ ನೀಡಿದರು.

ಬೆಸ್ಕಾಂ ಖರೀದಿಸಿರುವ 5 ವಿದ್ಯುತ್‌ ಚಾಲಿತ ಕಾರುಗಳಿಗೂ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ರಸ್ತು‍ತ ಕಚೇರಿ ಕೆಲಸಗಳಿಗಾಗಿ 5 ವಾಹನಗಳನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ನೂರು ಕಾರುಗಳನ್ನು ಖರೀದಿಸುವ ಉದ್ದೇಶವಿದೆ’ ಎಂದರು.

‘ವಿದ್ಯುತ್‌ ಚಾಲಿತ ವಾಹನಗಳು ಕಡಿಮೆ ವೆಚ್ಚ ಹೊಂದಿದ್ದು, ಪರಿಸರ ಸ್ನೇಹಿಯಾಗಿವೆ. ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣಕ್ಕಾಗಿ ಈ ಕೇಂದ್ರ ತೆರೆಯಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ನಗರದ 11 ಕಡೆ ಈ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ಇನ್ನಷ್ಟು ಕೇಂದ್ರಗಳನ್ನು ತೆರೆಯಲು ಬೆಂಗಳೂರು ಮೆಟ್ರೊ ರೈಲು ನಿಗಮ ಮತ್ತು ಬಿಬಿಎಂಪಿಗೆ ಪತ್ರ ಬರೆದಿದ್ದೇವೆ’ ಎಂದರು.

‘ಒಂದು ಚಾರ್ಜಿಂಗ್‌ ಕೇಂದ್ರಕ್ಕೆ ₹5 ಲಕ್ಷ ವೆಚ್ಚ ತಗುಲುತ್ತದೆ. ಇತರೆ ಮೂಲ ಸೌಕರ್ಯಗಳಿಗೆ ₹25 ಲಕ್ಷ ಬೇಕು. ಈ ಕೇಂದ್ರಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ’ ಎಂದು ಅವರು ಹೇಳಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾತನಾಡಿ, ‘ಒಂದು ಸಲ ಚಾರ್ಜ್‌ ಆದ ಬಳಿಕ ವಾಹನ 120 ಕಿ.ಮೀ.ಯಿಂದ 140 ಕಿ.ಮೀ. ವರೆಗೆ ಸಂಚರಿಸಲಿದೆ’ ಎಂದರು.

ಎಲ್ಲೆಲ್ಲಿ ಕೇಂದ್ರಗಳು

ಹೆಬ್ಬಾಳ, ದಾಸರಹಳ್ಳಿ, ಜಯನಗರ, ಕತ್ರಿಗುಪ್ಪೆ, ಬಿಟಿಎಂ ಲೇಔಟ್‌, ಪಾಂಡುರಂಗನಗರ, ಇಮ್ಮಡಿಹಳ್ಳಿ, ಇಂದಿರಾನಗರ, ಇ -1 ಉಪವಿಭಾಗ ಕಚೇರಿ (ಪಿಲ್ಲಣ್ಣ ಗಾರ್ಡನ್‌ ರಸ್ತೆ), ಪೂರ್ವ ವಲಯ ಕಚೇರಿ (ಎಚ್‌ಆರ್‌ಬಿಆರ್‌ ಲೇಔಟ್‌ 2ನೇ ಬ್ಲಾಕ್‌), ಲಿಂಗರಾಜಪುರ

ಚಾರ್ಜಿಂಗ್‌ ದರ (ತಾತ್ಕಾಲಿಕ– ಒಂದು ಯುನಿಟ್‌ಗೆ)

ಎಸಿ(ಆಲ್ಟರ್‌ನೆಟಿವ್‌ ಕರೆಂಟ್‌) ಚಾರ್ಜಿಂಗ್‌: ಬೆಳಿಗ್ಗೆ 6 ರಿಂದ ರಾತ್ರಿ 10ರ ವರೆಗೆ, ₹ 4.85. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ₹ 3.85.

ಡಿಸಿ(ಡೈರೆಕ್ಟ್‌ ಕರೆಂಟ್‌) ಚಾರ್ಜಿಂಗ್‌: ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ₹5, ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ₹3.85.

ಬಸ್‌ಗಳಿಗೆ: ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ₹5.50. ರಾತ್ರಿ 10ರಿಂದ ಬೆಳಿಗ್ಗೆ 6ರ ರವರೆಗೆ ₹ 3.85.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.