ಬೆಂಗಳೂರು: ‘ಅಂತರ ರಾಜ್ಯಗಳ ಜಲವಿವಾದ ಬಗೆಹರಿಸಲು ಸ್ಥಾಪನೆಯಾಗಿರುವ ನ್ಯಾಯಮಂಡಳಿಯಲ್ಲಿ ತಾಂತ್ರಿಕ ತಜ್ಞರು ಇರಬೇಕು ಹಾಗೂ ಅವರನ್ನು ನ್ಯಾಯಾಧೀಶರೆಂದು ಪರಿಗಣಿಸಬೇಕು’ ಎಂದು ಕಾಮಗಾರಿ ಗುಣ ನಿಯಂತ್ರಣ ಕಾರ್ಯಪಡೆಯ ಮಾಜಿ ಸದಸ್ಯ ಕಾರ್ಯದರ್ಶಿ ಐ.ರವೀಂದ್ರನಾಥ್ ಆಗ್ರಹಿಸಿದರು.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾವೇರಿ ನದಿ ನೀರು ಹಂಚಿಕೆ ವಿವಾದದ ತೀರ್ಪು ಬರಲು 15 ವರ್ಷಗಳು ಬೇಕಾಯಿತು. ನ್ಯಾಯಮಂಡಳಿಯಲ್ಲಿ ತಾಂತ್ರಿಕ ಪರಿಣತಿ ಹೊಂದಿರದವರ ಕೊರತೆಯೇ ವಿಳಂಬಕ್ಕೆ ಕಾರಣ’ ಎಂದರು.
‘ನ್ಯಾಯಮೂರ್ತಿಗಳು ಕಾನೂನು ಪರಿಣತಿ ಹೊಂದಿರುತ್ತಾರೆ. ಆದರೆ, ಜಲಾಶಯ, ನೀರಿಗೆ ಸಂಬಂಧಿಸಿದಂತೆ ತಾಂತ್ರಿಕ ಜ್ಞಾನ ಇರುವುದಿಲ್ಲ’ ಎಂದರು.
‘ಕಾವೇರಿ ನೀರು ಹಂಚಿಕೆ ಪ್ರಕರಣದ ಕುರಿತು ಎಂಜಿನಿಯರ್‌ಗಳು ನೀಡಿದ ಮಾಹಿತಿ ಹಾಗೂ ಅಂಕಿ ಅಂಶದ ಆಧಾರದಲ್ಲಿ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಾರೆ. ಆದರೆ, ಅದನ್ನು ನ್ಯಾಯಮೂರ್ತಿಗಳಿಗೆ ಸಂಪೂರ್ಣವಾಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ’ ಎಂದರು. ‘ತಮಿಳುನಾಡು ಕಾನೂನು ಸಮರಕ್ಕೆ ಮುಂದಾಗಿರುವುದು ಸರಿಯಲ್ಲ. ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಇತಿಶ್ರೀ ಹಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.