ADVERTISEMENT

2,033 ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 20:00 IST
Last Updated 19 ಫೆಬ್ರುವರಿ 2018, 20:00 IST

ಬೆಂಗಳೂರು: ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ತಾಲ್ಲೂಕು ಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 1,105 ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ 928 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2,033 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.

ಮೂವರು ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ನೀಡಿದ್ದು, ತಲಾ ₹12 ಸಾವಿರ ನಗದು ಬಹುಮಾನ ನೀಡಲಾಯಿತು. ಒಬ್ಬರಿಗೆ ದ್ವಿತೀಯ ಬಹುಮಾನ (₹11 ಸಾವಿರ ನಗದು) ಹಾಗೂ ಒಬ್ಬರಿಗೆ ತೃತೀಯ ಬಹುಮಾನ (₹10 ಸಾವಿರ ನಗದು) ಕೊಡಲಾಯಿತು.

ADVERTISEMENT

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ‘ಕನ್ನಡದ ಬಗ್ಗೆ ಕೀಳರಿಮೆ ಇಟ್ಟುಕೊಳ್ಳಬಾರದು. ಸಂಸ್ಕೃತಿ, ಸಂಸ್ಕಾರ, ಪ್ರೀತಿ-ವಿಶ್ವಾಸವನ್ನು ಪ್ರಾದೇಶಿಕ ಭಾಷೆಗಳು ಮಾತ್ರ ಸದೃಢಗೊಳಿಸಬಲ್ಲವು’ ಎಂದರು.

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ‘ಕನ್ನಡವನ್ನು ಭಾವನಾತ್ಮಕ ನೆಲೆಯಲ್ಲಿ ನೋಡುವುದರ ಜೊತೆಗೆ ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಬೇಕು. ಭಾಷೆ ಅನ್ನದ ಪ್ರಶ್ನೆಯಾಗದೆ ಜ್ಞಾನ, ಅರಿವು ಮತ್ತು ಆತ್ಮವಿಶ್ವಾಸದ ಸಂಕೇತವಾಗಿ ಬಳಕೆಯಾಗಬೇಕು’ ಎಂದು ಹೇಳಿದರು.

***

ಕೇಂದ್ರ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೂ ಆದ್ಯತೆ ನೀಡಬೇಕು. ದೇಶದ 22 ಭಾಷೆಗಳಲ್ಲಿ ಪ್ರಶ್ನೆಪತ್ರಿಕೆ ನೀಡಬೇಕು.
– ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.