ADVERTISEMENT

ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಐಐಎಸ್‌ಸಿ ಸಹಭಾಗಿತ್ವದಲ್ಲಿ ಸಂಶೋಧನೆ

ಎನ್.ನವೀನ್ ಕುಮಾರ್
Published 19 ಫೆಬ್ರುವರಿ 2018, 20:14 IST
Last Updated 19 ಫೆಬ್ರುವರಿ 2018, 20:14 IST
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ   

ಬೆಂಗಳೂರು: ನವಜಾತ ಶಿಶುಗಳ ರಕ್ತದೊತ್ತಡ ಹಾಗೂ ಹೃದಯ ಬಡಿತವನ್ನು ನಿಖರವಾಗಿ ತಪಾಸಣೆ ಮಾಡುವ ಉಪಕರಣವನ್ನು ಆವಿಷ್ಕರಿಸಲು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಹಭಾಗಿತ್ವದಲ್ಲಿ ಸಂಶೋಧನೆ ನಡೆಯುತ್ತಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ದೀಪ್ತಿ ವೇಪಕೊಮ್ಮ ಹಾಗೂ ಐಐಎಸ್‌ಸಿಯ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಅಶೋಕನ್‌ ನೇತೃತ್ವದಲ್ಲಿ ಸಂಶೋಧನೆ ನಡೆಯುತ್ತಿದೆ.

‘ಐಐಎಸ್‌ಸಿ ಎಂಜಿನಿಯರ್‌ಗಳು ಈಗಾಗಲೇ ಗಡಿಯಾರ ಆಕಾರದ ಉಪಕರಣವನ್ನು ತಯಾರಿಸಿದ್ದಾರೆ. ಇದನ್ನು ರೋಗಿಯ ಮೇಲೆ ಪ್ರಯೋಗಿಸುವ ಜತೆಗೆ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಅದರ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡುವಂತೆ ಸೂಚಿಸಿದ್ದೇವೆ’ ಎಂದು ಡಾ.ದೀಪ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತೀವ್ರ ನಿಗಾ ಘಟಕದಲ್ಲಿ ಇರಿಸಿದ ನವಜಾತ ಶಿಶುವಿಗೆ ವಿವಿಧ ಪರೀಕ್ಷೆಗಳನ್ನು ನಡೆಸಬೇಕು. ಮಗುವಿನ ರಕ್ತದೊತ್ತಡ, ಹೃದಯ ಬಡಿತ ಪರಿಶೀಲಿಸಬೇಕು. ಹೃದಯದಿಂದ ರಕ್ತದ ಹರಿವು ಯಾವ ಪ್ರಮಾಣದಲ್ಲಿದೆ ಎಂಬುದನ್ನು ಗಮನಿಸಿ ಚಿಕಿತ್ಸೆ ಮುಂದುವರಿಸಬೇಕಿರುತ್ತದೆ. ಇದಕ್ಕಾಗಿ ಎಕೊ ಪರೀಕ್ಷೆ ನಡೆಸಬೇಕು. ಆದರೂ, ನವಜಾತ ಶಿಶುಗಳಲ್ಲಿ ರಕ್ತದೊತ್ತಡ, ಹೃದಯ ಬಡಿತವನ್ನು ನಿಖರವಾಗಿ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ’ ಎಂದರು.

‘ಶಿಶುವಿನ ಹೃದಯ ಹೇಗೆ ಕೆಲಸ ಮಾಡುತ್ತಿದೆ, ಅದು ರಕ್ತವನ್ನು ಯಾವ ಪ್ರಮಾಣದಲ್ಲಿ ಪಂಪ್‌ ಮಾಡುತ್ತಿದೆ ಎಂಬುದು (ಕಾರ್ಡಿಯಾಕ್‌ ಔಟ್‌ಪುಟ್‌) ನಿಖರವಾಗಿ ಗೊತ್ತಾದರೆ ಅದಕ್ಕೆ ತಕ್ಕಂತೆ ಔಷಧ ನೀಡಬಹುದು. ಆದರೆ, ಇದನ್ನು ತಿಳಿದುಕೊಳ್ಳಲು ಪ್ರತಿದಿನ ಕನಿಷ್ಠ ಎರಡು ಬಾರಿ ಎಕೊ ಪರೀಕ್ಷೆ ನಡೆಸಬೇಕು. ಪ್ರತಿ ಬಾರಿ ಎಕೊ ಉಪಕರಣ ತಂದು ಶಿಶುವಿಗೆ ಅಳವಡಿಸಿ ಪರೀಕ್ಷೆ ನಡೆಸಲು ಕಷ್ಟಸಾಧ್ಯ. ಹೀಗಾಗಿ ಹೊಸ ಉಪಕರಣವನ್ನು ಕಂಡು ಹಿಡಿಯಲು ಮುಂದಾಗಿದ್ದೇವೆ’ ಎಂದು ವಿವರಿಸಿದರು.

‘ಈ ಉಪಕರಣವನ್ನು ಮಗುವಿನ ಕೈ ಹಾಗೂ ಎದೆ ಮೇಲೆ ಇಟ್ಟ ತಕ್ಷಣ ರಕ್ತದೊತ್ತಡ ಹಾಗೂ ಹೃದಯ ಬಡಿತದ ಮಾಹಿತಿಯನ್ನು ಮಾನಿಟರ್‌ಗೆ ರವಾನಿಸಲಿದೆ. ರಕ್ತದೊತ್ತಡ ಕಡಿಮೆ ಅಥವಾ ಜಾಸ್ತಿ ಇದೆಯೇ ಎಂಬುದನ್ನು ನೋಡಿಕೊಂಡು ಅದಕ್ಕೆ ತಕ್ಕಂತೆ ಫ್ಲೂಯಿಡ್ಸ್‌ ಹಾಗೂ ಔಷಧವನ್ನು ನೀಡಬಹುದು’ ಎಂದರು.

‘ರಕ್ತದೊತ್ತಡ ಹಾಗೂ ಹೃದಯ ಬಡಿತದ ಮಾಹಿತಿ ನೀಡುವ ದೊಡ್ಡ ಉಪಕರಣಗಳು ಇವೆ. ಸಣ್ಣ ಗಾತ್ರದ ಹಾಗೂ ಕಡಿಮೆ ಬೆಲೆಯ ಉಪಕರಣವನ್ನು ಈವರೆಗೂ ಕಂಡು ಹಿಡಿದಿಲ್ಲ. ಮೊದಲ ಬಾರಿಗೆ ಇಂತಹ ಸಾಧನ ಕಂಡು ಹಿಡಿಯುತ್ತಿದ್ದೇವೆ’ ಎಂದು ವಿವರಿಸಿದರು.‌

***

₹40 ಲಕ್ಷ – ಈ ಉಪಕರಣ ಆವಿಷ್ಕರಿಸುವ ಯೋಜನೆಯ ಒಟ್ಟು ವೆಚ್ಚ

₹38 ಲಕ್ಷ – ಐಐಎಸ್‌ಸಿ ಭರಿಸುತ್ತಿರುವ ಹಣ

₹2 ಲಕ್ಷ – ರಾಜೀವ್‌ ಗಾಂಧಿ ಆರೋಗ್ಯ ವಿ.ವಿ ನೀಡುತ್ತಿರುವ ಹಣ

***

ಪರೀಕ್ಷೆಗೆ ಕಡಿಮೆ ವೆಚ್ಚ

‘ಸರ್ಕಾರಿ ಆಸ್ಪತ್ರೆಗಳಲ್ಲಿ ಎಕೊ ಪರೀಕ್ಷೆಯನ್ನು ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಮಾಡಲಾಗುತ್ತದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ ₹500 ಶುಲ್ಕ ವಿಧಿಸಲಾಗುತ್ತದೆ. ದಿನಕ್ಕೆ ಎರಡು ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ₹1,000 ಭರಿಸಬೇಕು. ಇದರಿಂದ ಮಗುವಿನ ಪೋಷಕರಿಗೂ ಆರ್ಥಿಕವಾಗಿ ಹೊರೆ ಬೀಳಲಿದೆ’ ಎಂದು ಡಾ.ದೀಪ್ತಿ ಹೇಳಿದರು.

‘ಈ ಉಪಕರಣದ ಪ್ರಯೋಗ ಯಶಸ್ವಿಯಾದರೆ, ಬಡವರು ಸೇರಿದಂತೆ ಎಲ್ಲರಿಗೂ ಇದರಿಂದ ಅನುಕೂಲವಾಗಲಿದೆ. ಪ್ರಮುಖವಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಜಾತ ಶಿಶುಗಳಿಗೆ ಹೆಚ್ಚು ಅನುಕೂಲವಾಗಲಿದೆ. ನಿಖರವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ’ ಎಂದರು.

‘ವಯಸ್ಕರಿಗೂ ಉಪಯುಕ್ತ’

‘ನಮ್ಮ ಸಂಶೋಧನೆಯಲ್ಲಿ ಎರಡು ವಿಭಾಗಗಳಿವೆ. ನವಜಾತ ಶಿಶುವಿನ ಕಾರ್ಡಿಯಾಕ್‌ ಔಟ್‌ಪುಟ್‌ ತಿಳಿಯುವುದು ಹಾಗೂ ವಯಸ್ಕರ ರಕ್ತದೊತ್ತಡ ತಪಾಸಣೆ ನಡೆಸಲು ಅನುಕೂಲವಾಗುವ ಉಪಕರಣ ಕಂಡು ಹಿಡಿಯುವುದು. ವಯಸ್ಕರಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ರೋಗಿಯ ರಕ್ತದೊತ್ತಡ ಹೆಚ್ಚಾಗಿರುತ್ತದೆ. ಅರವಳಿಕೆ ತಜ್ಞರು ಇದರ ಮೇಲೆ ನಿಗಾ ಇರಿಸಿರುತ್ತಾರೆ. ರೋಗಿಯ ನರಕ್ಕೆ ಸೂಜಿ ರೀತಿಯ ಉಪಕರಣವನ್ನು ಚುಚ್ಚಿ, ಅದನ್ನು ಮಾನಿಟರ್‌ಗೆ ಸಂಪರ್ಕಿಸಲಾಗುತ್ತದೆ. ಅದರ ಮೂಲಕ ರಕ್ತದೊತ್ತಡದ ಮಾಹಿತಿ ಪಡೆಯಲಾಗುತ್ತದೆ. ಆದರೆ, ಹೊಸದಾಗಿ ಕಂಡುಹಿಡಿಯುತ್ತಿರುವ ಉಪಕರಣವನ್ನು ರೋಗಿಯ ಕೈಗೆ ಹಾಕುವ ಮೂಲಕ ಮಾಹಿತಿ ಪಡೆಯಬಹುದು’ ಎಂದು ಡಾ.ದೀಪ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.