ADVERTISEMENT

‘ನೀವೆಲ್ಲ ರಾಜಕಾರಣಿಗಳ ಮಕ್ಕಳಲ್ಲವೇ?’

ಕಾನೂನು ವಿದ್ಯಾರ್ಥಿಯ ಪ್ರಶ್ನೆಗೆ ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ತಬ್ಬಿಬ್ಬು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST
‘ನೀವೆಲ್ಲ ರಾಜಕಾರಣಿಗಳ ಮಕ್ಕಳಲ್ಲವೇ?’
‘ನೀವೆಲ್ಲ ರಾಜಕಾರಣಿಗಳ ಮಕ್ಕಳಲ್ಲವೇ?’   

ಬೆಂಗಳೂರು: ‘ಇಲ್ಲಿರುವ ನೀವೆಲ್ಲ ರಾಜಕಾರಣಿಗಳ ಮಕ್ಕಳಲ್ಲವೇ? ನಿಮಗೆ ಸಿಕ್ಕ ಅವಕಾಶ ನಮಗೆ ಸಿಗಲು ಹೇಗೆ ಸಾಧ್ಯ. ಹಣ ಮತ್ತು ಹಿನ್ನೆಲೆ ಇಲ್ಲದೆ ರಾಜಕೀಯ ನಾಯಕರಾಗಿ ಗುರುತಿಸಿಕೊಳ್ಳಬಹುದೇ?’

–ಶೇಷಾದ್ರಿಪುರಂ ಕಾನೂನು ಕಾಲೇಜಿನ ವಿದ್ಯಾರ್ಥಿ ಬಿ.ಎಲ್. ಸಂಜಯ್ ಕೇಳಿದ ಈ ಪ್ರಶ್ನೆಗೆ ಅಲ್ಲಿದ್ದ ಸಾವಿರಾರು ಮಂದಿ ಚಪ್ಪಾಳೆ ತಟ್ಟಿದರು.

ವೇದಿಕೆಯಲ್ಲಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್‌, ರಾಜ್ಯಸಭೆ ಸದಸ್ಯ ಪ್ರೊ. ರಾಜೀವ್‌ ಗೌಡ ಮತ್ತು ವಿಧಾನಪರಿಷತ್‌ ಸದಸ್ಯ ರಿಜ್ವಾನ್ ಅರ್ಷದ್ ಒಮ್ಮೆ ತಬ್ಬಿಬ್ಬುಗೊಂಡರು!

ADVERTISEMENT

ಎನ್‌ಎಸ್‌ಯುಐ (ವಿದ್ಯಾರ್ಥಿ ಕಾಂಗ್ರೆಸ್) ಮತ್ತು ಯುವ ಕಾಂಗ್ರೆಸ್ ಘಟಕಜಂಟಿಯಾಗಿ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ನನ್ನ ಕರ್ನಾಟಕ’ ಸಂವಾದವದು.

ಉತ್ತರಿಸಲು ತಡವರಿಸಿದ ದಿನೇಶ್‌, ಕೃಷ್ಣ, ಖರ್ಗೆ ನೆರವಿಗೆ ತಕ್ಷಣ ಬಂದವರು ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್. ‘ನಾನು ರಾಜಕೀಯ ಹಿನ್ನೆಲೆ
ಯಿಂದ ಬಂದವನಲ್ಲ. ಯುವ ಕಾಂಗ್ರೆಸ್‌ಗೆ ಚುನಾವಣೆ ಮೂಲಕ ನಾಯಕನಾಗಿ ಬೆಳೆದೆ. ಅದೇ ನನ್ನನ್ನು ವಿಧಾನಪರಿಷತ್‌ ಸದಸ್ಯನಾಗುವಂತೆ ಮಾಡಿದೆ. ವೈಯಕ್ತಿಕ ಕಠಿಣ ಪರಿಶ್ರಮ ಮತ್ತು ಪ್ರಯತ್ನದಿಂದ ಮೇಲೆ ಬಂದ ಹಲವು ನಾಯಕರು ಕಾಂಗ್ರೆಸ್‌ನಲ್ಲಿದ್ದಾರೆ’ ಎಂದರು.

‘ತಂದೆ 50 ವರ್ಷಗಳಿಂದ ರಾಜಕಾರಣದಲ್ಲಿದ್ದರೂ ನಾನು 20 ವರ್ಷ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ನಾನು ಕಣಕ್ಕಿಳಿದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದೆ. ಹೀಗಾಗಿ ನಾವು ಸಿಲೆಕ್ಟೆಡ್ ಅಲ್ಲ, ಎಲೆಕ್ಟೆಡ್. ತಂದೆ ಹೆಸರು ನನಗೆ ಅನುಕೂಲ ಆಗಿರಬಹುದು. ಶ್ರಮ, ಬದ್ಧತೆ ನೋಡಿ‌ ಜನ ಆಯ್ಕೆ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ
ಯಾರು ಬೇಕಾದರೂ ಸ್ಪರ್ಧಿಸಿ ಗೆಲುವು ಸಾಧಿಸಬಹುದು’ ಎಂದರು. ‘ರಾಜಕೀಯ ಹಿನ್ನೆಲೆ ಇಲ್ಲದೆ ನಾಯಕರಾದ ಹಲವರು ಪಕ್ಷದಲ್ಲಿದ್ದಾರೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ವಿವಿಧ ಕಾಲೇಜುಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಂಗ್ರೆಸ್‌ನ ಯುವ ಮುಖಂಡರ ಜೊತೆ ಸಂವಾದ ನಡೆಸಿದರು. ಟ್ರಾಫಿಕ್‌ ಸಮಸ್ಯೆ, ನೀರಿನ ಸಮಸ್ಯೆ, ನಿರುದ್ಯೋಗ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಮುಂತಾದ ವಿಷಯಗಳ ಕುರಿತು ಎದುರಾದ ಪ್ರಶ್ನೆಗಳಿಗೆ ಯುವ ನಾಯಕರು ಮುಖಾಮುಖಿಯಾದರು.

ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ‘ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ರಿಶೀಲಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘3–4 ದಶಕಗಳ ಹಿಂದ ಕರ್ನಾಟಕದಲ್ಲೂ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳು ಜೋರಾಗಿ ನಡೆಯುತ್ತಿದ್ದವು. ಅದರಿಂದ ಹಲವು ನಾಯಕರು ಹೊರ ಹೊಮ್ಮಿದರು. ಅನೇಕರು ರೈತ, ಬಂಡಾಯ ಹಾಗೂ ರಾಜಕೀಯ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಚಿಂತನಾಶೀಲ ಸಮಾಜ ಕಟ್ಟಲು ಕಾರಣರಾದರು. ಕೆಲವು ಕೆಟ್ಟ ಘಟನೆಗಳಿಂದಾಗಿ ವಿದ್ಯಾರ್ಥಿ ಸಂಘದ ಚುನಾವಣೆಗಳೇ ನಿಂತು ಹೋದವು’ ಎಂದರು.

‘ಪ್ರಜಾಸತ್ತಾತ್ಮಕ ಚಿಂತನೆ ಮತ್ತು ಸಾಮಾಜಿಕ ನಾಯಕತ್ವದ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘಟನೆಗಳು ಬಲಗೊಳ್ಳಬೇಕು. ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮಾತ್ರ ಬಲಗೊಂಡು ಯುವ ಜನರನ್ನು ದಾರಿ ತಪ್ಪಿಸುತ್ತಿರುವ ಆತಂಕ ಇದೆ’ ಎಂದು ವಿವರಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೃಷ್ಣ ಬೈರೇಗೌಡ, ‘ಹಿಂದುಳಿದ ಅಥವಾ ಶೋಷಿತ ವರ್ಗಕ್ಕೆ ಸಮಾನ ಅವಕಾಶ ಸಿಗಬೇಕು. ಮಹಿಳೆಯರು- ಪುರುಷರು ಎಂಬ ತಾರತಮ್ಯ ಇರಬಾರದು ಎನ್ನುವುದು ನಮ್ಮ ಸರ್ಕಾರದ ನಿಲುವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.