ADVERTISEMENT

6 ಪೊಲೀಸ್ ತರಬೇತಿ ಶಾಲೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST
ತರಬೇತಿ ಅವಧಿಯಲ್ಲಿ ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗೈದ ಸದಾಶಿವ ಬಗಲಿ ಅವರಿಗೆ ಗೃಹಸಚಿವ ಕೆ.ಜೆ.ಜಾರ್ಜ್, ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ನೀಡಿ ಗೌರವಿಸಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌ ರುಕುಂ ಪಚಾವೋ ಇತರರು ಇದ್ದಾರೆ
ತರಬೇತಿ ಅವಧಿಯಲ್ಲಿ ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗೈದ ಸದಾಶಿವ ಬಗಲಿ ಅವರಿಗೆ ಗೃಹಸಚಿವ ಕೆ.ಜೆ.ಜಾರ್ಜ್, ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ನೀಡಿ ಗೌರವಿಸಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌ ರುಕುಂ ಪಚಾವೋ ಇತರರು ಇದ್ದಾರೆ   

ಯಲಹಂಕ: ಪೊಲೀಸ್‌ ತರಬೇತಿ ಸಾಮರ್ಥ್ಯ­ವನ್ನು ಸುಧಾರಿಸುವ ನಿಟ್ಟಿ­ನಲ್ಲಿ  ರಾಜ್ಯದಾದ್ಯಂತ ಆರು ನೂತನ ಪೊಲೀಸ್‌ ತರಬೇತಿ ಶಾಲೆಗಳನ್ನು ಆರಂಭಿ­ಸಲು ಚಿಂತನೆ ನಡೆಸಲಾಗಿದೆ ಎಂದು ಗೃಹಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಇಲ್ಲಿನ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆಯಲ್ಲಿ ನಡೆದ 28ನೇ ತಂಡದ ಸಶಸ್ತ್ರ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ­ದಲ್ಲಿ ಗೌರವವಂದನೆ ಸ್ವೀಕರಿಸಿ ಮಾತ­ನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೆಂಗಳೂರು, ಚಿತ್ರದುರ್ಗ, ಮೈಸೂರು, ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮೂರು ವರ್ಷದ ಒಳಗೆ   ನೂತನ ಪೊಲೀಸ್‌ ತರಬೇತಿ ಶಾಲೆಗಳನ್ನು ತೆರೆ­ಯಲು ನಿರ್ಧರಿಸ ಲಾಗಿದೆ ಎಂದರು.

ಪೊಲೀಸ್‌ ಇಲಾಖೆಗೆ ಹೊಸದಾಗಿ 8,500 ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಲಾಗುತ್ತಿದ್ದು, ಇದರಲ್ಲಿ ಶೇ.20­ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾ ಗುವುದು. ಅಲ್ಲದೆ ಗುಡ್ಡಗಾಡು ಮತ್ತು ಬುಡಕಟ್ಟು ಜನಾಂಗದವರಿಗೂ ನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಪೊಲೀಸ್‌ ಮಹಾನಿರ್ದೇಶಕ­(ತರಬೇತಿ) ಕೆ.ಎಸ್‌.ಆರ್‌.ಚರಣ್‌ರೆಡ್ಡಿ ಮಾತನಾಡಿ, 28ನೇ ತಂಡದಲ್ಲಿ 455 ಸಶಸ್ತ್ರ ಪೊಲೀಸ್‌ ಪ್ರಶಿಕ್ಷಣಾರ್ಥಿಗಳಿದ್ದು, ಇದು ಈ ತರಬೇತಿಶಾಲೆಯ ಅತಿದೊಡ್ಡ ನಿರ್ಗಮನ ಪಥಸಂಚಲನವಾಗಿದೆ. ಇವರು ರಾಜ್ಯದ 12  ವಿವಿಧ ಘಟಕ­ಗಳಿಗೆ ಸೇರಿದವರಾಗಿದ್ದು, ಮುಂದೆ ಆಯಾ ಘಟಕಗಳ ಸಶಸ್ತ್ರ ಮೀಸಲು ಪಡೆಗಳಲ್ಲಿ ಸೇವೆ ಸಲ್ಲಿಸಲು ಸಿದ್ಧ­ರಾಗುತ್ತಾರೆ ಎಂದು ಹೇಳಿದರು.

ತರಬೇತಿ ಅವಧಿಯಲ್ಲಿ ಒಳಾಂಗಣ, ಹೊರಾಂಗಣ ಹಾಗೂ ಫೈರಿಂಗ್‌ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸ­ಲಾಯಿತು. ಸದಾಶಿವ ಬಗಲಿ ಅವರಿಗೆ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌­ರುಖುಮಾ ಪಚಾವೋ, ಪೊಲೀಸ್‌ ಮಹಾನಿರ್ದೇಶಕ(ತರಬೇತಿ) ಸುಶಾಂತ್‌ ಮಹಾಪಾತ್ರ ಮತ್ತಿತರರು ಹಾಜರಿದ್ದರು.

ತನಿಖೆ ಪ್ರಗತಿಯಲ್ಲಿ
ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ­ದಂತೆ ತನಿಖೆ ಪ್ರಗತಿಯಲ್ಲಿದ್ದು, ಆರೋಪಿಯು ಹೊರರಾಜ್ಯದಲ್ಲಿ ತಲೆಮರೆಸಿ­ಕೊಂಡಿರು ವುದರಿಂದ ಆತನನ್ನು ಬಂಧಿಸಲು ವಿಳಂಬವಾಗುತ್ತಿದೆ ಎಂದು ಗೃಹಸಚಿವ ಜಾರ್ಜ್‌ ಹೇಳಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ­ಯನ್ನು ಶೀಘ್ರದಲ್ಲೆ ಬಂಧಿಸುವ ನಿಟ್ಟಿನಲ್ಲಿ ಹೊರರಾಜ್ಯದ ಪೊಲೀಸರೊಂದಿಗೆ ರಾಜ್ಯ ಪೊಲೀಸರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT