ADVERTISEMENT

ಒಂದೇ ವೇದಿಕೆಯಲ್ಲಿ 67 ಬರಹಗಾರರ ಕೃತಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 15:59 IST
Last Updated 10 ಡಿಸೆಂಬರ್ 2022, 15:59 IST
ನಗರದಲ್ಲಿ ಶನಿವಾರ ಸಪ್ನ ಬುಕ್‌ ಹೌಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ 67 ಕೃತಿಗಳನ್ನು ಬಿಡುಗಡೆ ಮಾಡಿದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕೃತಿಯೊಂದನ್ನು ಇನ್ಫೊಸಿಸ್‌ ಪ್ರತಿಷ್ಠಾನದ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅವರಿಗೆ ನೀಡಿದರು. (ಎಡದಿಂದ) ಪ್ರೊ.ಮಲ್ಲೇಪುರ ಜಿ. ವೆಂಕಟೇಶ, ನಿತಿನ್‌ ಷಾ ಹಾಗೂ ಸಾಹಿತಿ ದೊಡ್ಡರಂಗೇಗೌಡ ಹಾಜರಿದ್ದರು
ನಗರದಲ್ಲಿ ಶನಿವಾರ ಸಪ್ನ ಬುಕ್‌ ಹೌಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ 67 ಕೃತಿಗಳನ್ನು ಬಿಡುಗಡೆ ಮಾಡಿದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕೃತಿಯೊಂದನ್ನು ಇನ್ಫೊಸಿಸ್‌ ಪ್ರತಿಷ್ಠಾನದ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅವರಿಗೆ ನೀಡಿದರು. (ಎಡದಿಂದ) ಪ್ರೊ.ಮಲ್ಲೇಪುರ ಜಿ. ವೆಂಕಟೇಶ, ನಿತಿನ್‌ ಷಾ ಹಾಗೂ ಸಾಹಿತಿ ದೊಡ್ಡರಂಗೇಗೌಡ ಹಾಜರಿದ್ದರು   

ಬೆಂಗಳೂರು: ‘ಮೂಲ ಕೃತಿಗಳ ಜೊತೆಗೆ ಅನುಸಂಧಾನ ನಡೆಸುವುದನ್ನು ಹೊಸ ತಲೆಮಾರಿನ ಬರಹಗಾರರು ಸೇರಿ ಅನೇಕರು ಕಡಿಮೆ ಮಾಡಿದ್ದಾರೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್‌ ಹೌಸ್‌ ಹೊರತಂದಿದ್ದ 67 ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ‘ಕೃತಿ ವಿಸ್ತಾರ...’ ಕುರಿತು ಮಾತನಾಡಿದರು.

‘ಲೌಕಿಕ ಹಾಗೂ ಆಗಮಿಕ ಪರಿಕಲ್ಪನೆ ಅಡಿ ರಚಿತವಾದ ಕಾವ್ಯಗಳ ಓದುಗರ ಸಂಖ್ಯೆ ಸಹ ಕಡಿಮೆಯಾಗಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದ ಸಮಸ್ತ ಲೇಖಕ ಸಮೂಹ ಒಳಗೊಂಡಂತೆ ಕೃತಿ ಪ್ರಕಟಿಸಲಾಗಿದೆ. ಕಥೆ, ಕಾದಂಬರಿ, ಕೃಷಿ, ಅನುವಾದ, ಧರ್ಮ ದರ್ಶನ, ಅಂಕಣ ಬರಹ, ಏಕೀಕರಣಕ್ಕೆ ದುಡಿದ ಮಹನೀಯರ ಮಾಹಿತಿ, ಅನುಭವ ಕಥನ, ವೈದ್ಯಕೀಯ ಬರಹ, ಹಾಸ್ಯ ಬರಹ, ಅರಣ್ಯನಾಶ, ತಂತ್ರಜ್ಞಾನ, ಮಕ್ಕಳ ಕಥೆ ಕುರಿತು ರಚಿತವಾದ ಕೃತಿಗಳು ಈ ವೇದಿಕೆಯಲ್ಲಿ ಬಿಡುಗಡೆಗೊಂಡಿವೆ. ಕೃತಿಗಳು ವೈವಿಧ್ಯಮವಾಗಿವೆ. 21ನೇ ಶತಮಾನವು ಎಲ್ಲ ಪ್ರಕಾರದ ಬರಹಕ್ಕೆ ತೆರೆದುಕೊಂಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಮಕ್ಕಳ ಸಾಹಿತ್ಯದಲ್ಲಿ ನೈತಿಕತೆ ಹಾಗೂ ತಾತ್ವಿಕತೆ ಅಡಕವಾಗಿದೆ. ವಿದ್ವತ್‌ ವಲಯ ಓದುವ ಹಾಗೂ ಕನ್ನಡದ ಸಮಗ್ರತೆ ಪರಿಚಯಿಸುವ ಕೃತಿಗಳು ಇವಾಗಿವೆ’ ಎಂದು ಬಣ್ಣಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಸಾಹಿತ್ಯದ ಓದಿನಿಂದ ಮನಸ್ಸು ಶುದ್ಧವಾಗಲಿದೆ. ಕಲ್ಮಶ ದೂರವಾಗಲಿದೆ. ಸಾಹಿತ್ಯ ಓದಿನಿಂದ ಬದಲಾವಣೆಗಳು ನಡೆಯಲಿವೆ. ಸ್ಫಟಿಕದಂತಹ ಬರಹಗಳ ಓದು ಚಿಂತನೆಗೆ ಹಚ್ಚಲಿದೆ. ಕಾವ್ಯಕ್ಕೆ ಕವಿಯೇ ವಾರಸುದಾರರ. ಬರಹಗಾರರ ಅನುಭವಗಳು ಬೇರೆಯವರಲ್ಲೂ ಅರಿವು ಮೂಡಿಸಲಿ’ ಎಂದು ಆಶಿಸಿದರು.

‘ಆರು ತಿಂಗಳ ಪರಿಶ್ರಮದಿಂದ 67 ಶ್ರೇಷ್ಠ ಕೃತಿಗಳು ಹೊರಬಂದಿವೆ. ಒಂದಕ್ಕಿಂತ ಒಂದು ಕೃತಿ ಭಿನ್ನವಾಗಿದೆ. ವಿದ್ವಾಂಸರ ರಾಜ್ಯ ನಮ್ಮದು. 68ನೇ ಕರ್ನಾಟಕ ರಾಜ್ಯೋತ್ಸವಕ್ಕೆ ಅಷ್ಟೇ ಸಂಖ್ಯೆಯ ಮೌಲ್ಯಯುತ ಕೃತಿಗಳು ಹೊರಬರುತ್ತವೆ. ಸಪ್ನ ಬುಕ್‌ ಹೌಸ್‌ ಅಂತಹ ಮಹತ್ವದ ಕಾರ್ಯದಲ್ಲಿ ತೊಡಗಿದೆ’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಸಂಸ್ಥಾ‍ಪಕಿ ಡಾ.ಸುಧಾ ಮೂರ್ತಿ ಆಶಿಸಿದರು.

ಸಾಹಿತಿ ಡಾ.ದೊಡ್ಡರಂಗೇಗೌಡ ಅವರು, ‘ನಾಲ್ಕರಿಂದ ಐದು ಕೃತಿಗಳ ಪ್ರಕಟಣೆ ಸಹಜ. ಒಂದೇ ವೇದಿಕೆಯಲ್ಲಿ 67 ಕೃತಿಗಳನ್ನು ಪ್ರಕಟಿಸುವುದು ಕನ್ನಡದ ಹೆಮ್ಮೆಯ ಕೆಲಸ. ಇದು ಸಾಹಿತ್ಯ ಜಾತ್ರೆಯಂತೆ ಭಾಸವಾಗುತ್ತಿದೆ. ಲೇಖಕರ ಆಯ್ಕೆ, ಪ್ರಕಟಣೆಯಲ್ಲಿ ಕರ್ತವ್ಯಪ್ರಜ್ಞೆ ತೋರಲಾಗಿದೆ. ಮುತ್ತಿನಂತಹ ಕೃತಿಗಳು ಪ್ರಕಟವಾಗಿವೆ’ ಎಂದು ಪ್ರತಿಪಾದಿಸಿದರು.

‘ಗ್ರಂಥಗಳು ಚಾರಿತ್ರಿಕ ಹೆಗ್ಗುರುತುಗಳಿದ್ದಂತೆ. ಮೌಲಿಕ ನಡವಳಿಕೆಗಳ ಅನಾವರಣ ಈ ಕೃತಿಯಿಂದ ಸಾಧ್ಯವಾಗಿದೆ. ಈ ಎಲ್ಲ ಕೃತಿಗಳು ಸಾಂಸ್ಕೃತಿಕ ಶಿಖರವಾಗಿ ಜ್ಞಾನದ ತವನಿಧಿಗಳಂತೆ ಕಾಣಿಸಲಿವೆ. ಮುಂದಿನ ಪೀಳಿಗೆಗೆ ಮೌಲ್ಯಯುತ ಜೀವನಧಾರೆ ತೋರಿಸಲಿ. ಬರಹಗಾರರ ನೋವು, ನಲಿವು, ತುಡಿತ ಅನಾವರಣವಾಗಿವೆ. ಉತ್ಕೃಷ್ಟತೆಗೆ ಸಾಕ್ಷಿಯಾಗಿದೆ. ಕೃತಿಕಾರನ ಅನುಭವ ಕಟ್ಟಿಕೊಡಲಾಗಿದೆ. ದೇಶೀಯ ಸೊಗಡು ಅನಾವರಣಗೊಂಡಿದೆ’ ಎಂದು ಹೇಳಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ‘ಸಮಕಾಲೀನ ಪುಸ್ತಕ ಸಂಸ್ಕೃತಿ’ ಕುರಿತು ಮಾತನಾಡಿದರು. ಸಪ್ನ ಬುಕ್‌ ಹೌಸ್‌ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ ಸ್ವಾಗತಿಸಿದರು. ಕೃತಿಗಳ ಬಿಡುಗಡೆಗೂ ಮುನ್ನ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಪುಸ್ತಕದ ಮಹೋತ್ಸವದಲ್ಲಿ ಎಲ್ಲ ಲೇಖಕರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.