ADVERTISEMENT

67.3 ಎಕರೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 19:30 IST
Last Updated 3 ಜೂನ್ 2017, 19:30 IST
67.3 ಎಕರೆ ಒತ್ತುವರಿ ತೆರವು
67.3 ಎಕರೆ ಒತ್ತುವರಿ ತೆರವು   

ಬೆಂಗಳೂರು: ನಗರದ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ  ಶನಿವಾರ ಏಕಕಾಲದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಒಟ್ಟು  67 ಎಕರೆ 03 ಗುಂಟೆ ಜಾಗವನ್ನು ವಶಕ್ಕೆ ಪಡೆದಿದೆ. ಇದರ  ಮೌಲ್ಯ  ₹ 545  ಕೋಟಿ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ, ಉತ್ತರಹಳ್ಳಿ ಹೋಬಳಿಯ ಗೊಲ್ಲಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ 9 ಎಕರೆ 30  ಗುಂಟೆ ಸರ್ಕಾರಿ ಜಮೀನನ್ನು  ಜಿಲ್ಲಾಧಿಕಾರಿ ವಿ.ಶಂಕರ್ ನಿರ್ದೇಶನದಂತೆ ತಹಶೀಲ್ದಾರ್, ಎಸ್.ಎಂ.ಶಿವಕುಮಾರ್ ಅವರು   ತೆರವುಗೊಳಿಸಿದರು. 

ಬಿಡಿಎ ಬಡಾವಣೆ ಹಾಗೂ ನೈಸ್‌  ರಸ್ತೆ ನಡುವೆ ಇರುವ ಈ ಜಮೀನಿನ ಒಟ್ಟು ಮೌಲ್ಯ ₹400 ಕೋಟಿ ಎಂದು ಅಂದಾಜಿಸಲಾಗಿದೆ.

ADVERTISEMENT

ನೈಸ್ ಸಂಸ್ಥೆಯವರು ರಸ್ತೆಗಾಗಿ 24 ಗುಂಟೆ, ಸ್ಮಾರ್ಟ್ ಗ್ರಾನೈಟ್ಸ್ ಆ್ಯಂಡ್ ಮಾರ್ಬಲ್ಸ್ ಇಂಡಿಯಾ ಸಂಸ್ಥೆ 2 ಎಕರೆ, ಮಡಿವಾಳರ ಸಂಘ  20 ಗುಂಟೆ, ಅಂಬೇಡ್ಕರ್ ಸಂಘ  20 ಗುಂಟೆ, ರತ್ನಮ್ಮ  10 ಗುಂಟೆ ಜಾಗ ಒತ್ತುವರಿ ಮಾಡಿಕೊಂಡಿದ್ದರು. ಉಳಿಕೆ ಭೂಮಿಯಲ್ಲಿ ಕೆಲವರು ಸುಮಾರು 42 ವಸತಿ ಶೆಡ್‌ಗಳನ್ನು ನಿರ್ಮಿಸಿ ವಲಸೆ  ಕಾರ್ಮಿಕರಿಗೆ ಬಾಡಿಗೆಗೆ ನೀಡಿದ್ದರು.

ಗೊಲ್ಲಹಳ್ಳಿ ಗ್ರಾಮದ  ಮುಫತ್ತುಕಾವಲಿನಲ್ಲಿ ಒಟ್ಟು 62 ಎಕರೆ 26 ಎಕರೆ ಸರ್ಕಾರಿ ಖರಾಬು ಜಮೀನಿದ್ದು, ಇದರಲ್ಲಿ 33 ಎಕರೆ 14 ಗುಂಟೆ ಜಮೀನು ಫಲಾನುಭವಿಗಳಿಗೆ  ಮಂಜೂರಾಗಿದೆ.  ಹಂಚಿಕೆ ಆಗದೇ ಇರುವ 29 ಎಕರೆ 05  ಗುಂಟೆ ಜಮೀನನ್ನು  ಮುನಿಚಿನ್ನಪ್ಪ ಹಾಗೂ ಗಿರೀಶ್ ಜಾಧವ್ ಹಾಗೂ ರಾಮಲಾಲ್‌  ಅವರು ಒತ್ತುವರಿ ಮಾಡಿಕೊಂಡಿದ್ದರು.
ಈ ಜಾಗದಲ್ಲಿ ಕಟ್ಟಡದ  ಅವಶೇಷಗಳನ್ನು ಸುರಿಯಲು ಅವಕಾಶ ಮಾಡಿಕೊಟ್ಟು,  ಪ್ರತಿ ಟ್ರ್ಯಾಕ್ಟರ್ ಲೋಡಿಗೆ ₹ 500ರಂತೆ  ಹಾಗೂ  ಲಾರಿ ಲೋಡಿಗೆ ₹ 2,500  ರಂತೆ ವಸೂಲಿ ಮಾಡುತ್ತಿದ್ದರು. ಈ ಅವಶೇಷಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಜಾಗವನ್ನು ವಶಕ್ಕೆ ಪಡೆದರು. 
ಚೌಡಪ್ಪ ಅವರು ಸರ್ಕಾರದಿಂದ ಹಂಚಿಕೆ ಆದ ನಿವೇಶನವನ್ನು ಮಾರಾಟ ಮಾಡಿ, ಅದರ  ಪಕ್ಕದ ನಿವೇಶನವನ್ನು ಅತಿಕ್ರಮಿಸಿಕೊಂಡಿದ್ದರು.  ಅವರು  ಸಾರ್ವಜನಿಕ ದಾರಿಯನ್ನೇ ‘ಎಲ್’ ಆಕಾರಕ್ಕೆ ಮಾರ್ಪಡಿಸಿ,  ಆ ನಿವೇಶನದ ಮೂರುಕಡೆ ರಸ್ತೆ ಹೊಂದುವಂತೆ ಮಾಡಿಕೊಂಡಿದ್ದರು. ಅಧಿಕಾರಿಗಳು ಆ ನಿವೇಶನವನ್ನೂ ವಶಕ್ಕೆ ಪಡೆದರು.
ಭೂಮಿ ಅಳತೆ ಮಾಡಿ ಪೋಡಿ ಮಾಡಲು ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ತೆರಳಿದಾಗ ಈ ಒತ್ತುವರಿ ಪ್ರಕರಣ ಬೆಳಕಿಗೆಬಂದಿತ್ತು.

ಸಿದ್ದಾಪುರ ಗ್ರಾಮದಲ್ಲಿ  22 ಗುಂಟೆ ಒತ್ತುವರಿ ತೆರವು

ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಸಿದ್ದಾಪುರ ಗ್ರಾಮದ ಸರ್ಕಾರಿ ಮುಫತ್‌ ಕಾವಲ್‌ನ ಸರ್ವೆ ನಂಬರ್ 7 ರಲ್ಲಿ  ಮಾರತ್ತಹಳ್ಳಿ-ವರ್ತೂರು ಮುಖ್ಯರಸ್ತೆಗೆ ಹೊಂದಿಕೊಂಡಂತೆ 22 ಗುಂಟೆ ಜಾಗವಿದೆ. ಡಿ-ಮಾರ್ಟ್ ವಾಣಿಜ್ಯ ಮಳಿಗೆ ಪಕ್ಕದಲ್ಲಿರುವ ಈ ಜಾಗದಲ್ಲಿ   10 ಗುಂಟೆ ಜಾಗವನ್ನು ವಾಹನ ನಿಲುಗಡೆಗಾಗಿ ಒತ್ತುವರಿ ಮಾಡಿಕೊಂಡಿದ್ದರು.  ಉಳಿದ ಜಾಗದಲ್ಲಿ ಸ್ಥಳಿಯ ಕೆಲವರು ತಾತ್ಕಾಲಿಕ ಕಟ್ಟಡ ನಿಮಿಸಿ ಬಾಡಿಗೆಗೆ ನೀಡಿದ್ದರು. ಅವುಗಳಲ್ಲಿ ವಾಹನ ದುರಸ್ತಿ,   ಗುಜರಿ, ವಾಹನಗಳ ಬಿಡಿಭಾಗ ಮಾರಾಟ,  ಹಾಸಿಗೆ, ಮರದ ಸಾಮಗ್ರಿ ಮಾರಾಟ ಮಳಿಗೆಗಳಿದ್ದವು. ಅವುಗಳನ್ನು ತಹಶೀಲ್ದಾರ್  ಎನ್.ತೇಜಸ್‌ ಕುಮಾರ್‌ ನೇತೃತ್ವದಲ್ಲಿ ಅಧಿಕಾರಿಗಳು ತೆರವುಗೊಳಿಸಿದರು.  ಈ ಜಮೀನಿನ ಮೌಲ್ಯ ₹ 25  ಕೋಟಿ  ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿ, ತೋಟಗೆರೆ ಗ್ರಾಮದಲ್ಲಿ ಒತ್ತುವರಿಯಾಗಿದ್ದ 13 ಎಕರೆ 39  ಗುಂಟೆ ಸರ್ಕಾರಿ ಗೋಮಾಳವನ್ನು ಹಾಗೂ ಕುಕ್ಕನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ 13 ಎಕರೆ 27  ಗುಂಟೆ  ಗೋಮಾಳವನ್ನು ತಹಶೀಲ್ದಾರ್  ವಿ.ಹನುಮಂತರಾ ಯಪ್ಪ  ನೇತೃತ್ವದಲ್ಲಿ ತೆರವುಗೊಳಿಸಲಾ ಯಿತು. ಈ ಜಾಗದ  ಮೌಲ್ಯ ₹ 120 ಕೋಟಿ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.