ADVERTISEMENT

ಉಪಚುನಾವಣೆಗೆ ₹7.05 ಕೋಟಿ ವೆಚ್ಚ, ₹3,320 ಕೋಟಿ ಪೂರಕ ಅಂದಾಜು ಮಂಡನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 20:42 IST
Last Updated 8 ಡಿಸೆಂಬರ್ 2020, 20:42 IST

ಬೆಂಗಳೂರು: ₹3,320 ಕೋಟಿ ಮೊತ್ತದ ಪೂರಕ ಅಂದಾಜಿನ ಎರಡನೇ ಕಂತನ್ನು (2020–21) ವಿಧಾನಸಭೆಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಂಗಳವಾರ ಮಂಡಿಸಿದರು.

ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣಾ ವೆಚ್ಚಕ್ಕಾಗಿ ಹೆಚ್ಚುವರಿಯಾಗಿ ₹4 ಕೋಟಿ ಬಿಡುಗಡೆ ಮಾಡಲಾಗಿದ್ದು, ₹3.05 ಕೋಟಿಯನ್ನು ಸಾದಿಲ್ವಾರು ನಿಧಿಯಿಂದ ಭರಿಸಲಾಗಿದೆ. ಇದಕ್ಕಾಗಿ ಪೂರಕ ಅಂದಾಜಿನಲ್ಲಿ ₹7.05 ಕೋಟಿ ಕೋರಲಾಗಿದೆ. ವಿಧಾನಪರಿಷತ್‌ ಚುನಾವಣಾ ವೆಚ್ಚಕ್ಕಾಗಿ ₹2.50 ಕೋಟಿಯನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ.

ಬೆಂಗಳೂರಿನ ಜಯನಗರ ಯುವಕ ಸಂಘದ ಅಮೃತ ಮಹೋತ್ಸವದ ಪ್ರಯುಕ್ತ ಯುವಕ ಸಂಘದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ₹10 ಕೋಟಿ ಒದಗಿಸಲು ಪ್ರಸ್ತಾಪಿಸಲಾಗಿದೆ. ಬೆಂಗಳೂರಿನ ಪೆರಿಫೆರಲ್‌ ವರ್ತುಲ ರಸ್ತೆ ಅಭಿವೃದ್ಧಿ ನಿಗಮದ ಎಸ್‌ಪಿವಿಗೆ ₹12.50 ಕೋಟಿ
ಒದಗಿಸಲಾಗುತ್ತಿದೆ.

ADVERTISEMENT

ಕೋವಿಡ್‌ ನಿಯಂತ್ರಣಕ್ಕಾಗಿ ತುರ್ತು ಔಷಧಿ, ಆರ್‌ಟಿಪಿಸಿಆರ್‌ ಕಿಟ್‌ಗಳು, ಎಕ್ಸ್‌ಟ್ರಾಕ್ಷನ್‌ ಕಿಟ್‌ಗಳ ಖರೀದಿಗೆ ₹170 ಕೋಟಿ ಹಾಗೂ ವೆಂಟಿಲೇಟರ್‌, ಪಲ್ಸ್‌ ಅಕ್ಸಿಮೀಟರ್‌ ಖರೀದಿಗೆ ₹34.68 ಕೋಟಿ ಒದಗಿಸಲಾಗುತ್ತದೆ. ಚಿಕ್ಕಬಳ್ಳಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ ರಾಜ್ಯದ ಪಾಲಿನ ರೂಪದಲ್ಲಿ ₹43 ಕೋಟಿ, ಹಾವೇರಿ, ಯಾದಗಿರಿ ಹಾಗೂ ಚಿಕ್ಕಮಗಳೂರಿನಲ್ಲಿ ವೈದ್ಯಕೀಯ ಕಾಲೇಜುಗಳ ಕಾಮಗಾರಿಗೆ ₹100 ಕೋಟಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.