ADVERTISEMENT

ಫೆಬ್ರುವರಿಯೊಳಗೆ 7 ಲಕ್ಷ ಮನೆ ಪೂರ್ಣ: ಸಿಎಂ ಗುರಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 16:31 IST
Last Updated 21 ನವೆಂಬರ್ 2022, 16:31 IST
   

ಬೆಂಗಳೂರು: 2023ರ ಫೆಬ್ರುವರಿ ಕೊನೆಯೊಳಗೆ 7 ಲಕ್ಷ ಮನೆಗಳನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರಿ ನಿಗದಿ ಮಾಡಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿರ್ಮಾಣದ ವಿವಿಧ ಹಂತಗಳಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಇದನ್ನು ಆಂದೋಲನದ ರೂಪದಲ್ಲಿ ಕೈಗೊಳ್ಳಬೇಕು. ಈ ಕಾರ್ಯಕ್ಕೆ ಅಗತ್ಯವಿರುವ ಸಿಬ್ಬಂದಿ ಪೂರೈಸಲು ಸಿದ್ಧರಿದ್ದೇವೆ. ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಸಭೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ಬೊಮ್ಮಾಯಿ ಹೇಳಿದರು.

ಎಲ್ಲಾ ಕೆಡಿಪಿ ಸಭೆಗಳಲ್ಲಿ ವಿವಿಧ ವಸತಿ ಯೋಜನೆಗಳಡಿ ಗೃಹ ನಿರ್ಮಾಣ ಪ್ರಮುಖ ವಿಷಯವಾಗಬೇಕು. ಹಿಂದಿನ ವರ್ಷಗಳ ಮನೆಗಳ ಪೈಕಿ 2 ಲಕ್ಷಕ್ಕೂ ಹೆಚ್ಚಿನ ಮನೆಗಳು ಹಾಗೂ ಪ್ರಸಕ್ತ ಸಾಲಿನ 2 ರಿಂದ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸಬೇಕು. ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರ ಸಭೆ ಕರೆದು ಸಾಲ ನೀಡುವ ನಿಯಮಗಳ ಬಗ್ಗೆ ಚರ್ಚಿಸುವಂತೆಯೂ ಅವರು ಸಲಹೆ ನೀಡಿದರು.

ADVERTISEMENT

20 ಸಾವಿರ ಮನೆಗಳ ನಿರ್ಮಾಣ ಮಾಡಲು ಅನುದಾನದ ಕೊರತೆ ಆಗದಂತೆ ಕ್ರಮವಹಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ಒಟ್ಟು ₹1,089 ಕೋಟಿ ಲಭ್ಯವಿದೆ. ಫಲಾನುಭವಿಗಳು ನೀಡಬೇಕಿರುವ ಅನುದಾನವನ್ನು ಸರ್ಕಾರವೇ ನೀಡಿ, ಫಲಾನುಭವಿಗಳು ಹಣ ಮರುಪಾವತಿ ಮಾಡುವ ಷರತ್ತು ವಿಧಿಸಿ, ಕಂತಿನ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿ ಮಾಡುವಂತೆಯೂ ಬೊಮ್ಮಾಯಿ ಸೂಚಿಸಿದರು. ಸಭೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.