
ಹಣ ತುಂಬಿದ್ದ ಸಿಎಂಎಸ್ ಏಜೆನ್ಸಿ ವಾಹನ ಮತ್ತು ದರೋಡೆಕೋರರು ಬಳಸಿದ್ದ ಇನೊವಾ ಕಾರು
ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್ ಏಜೆನ್ಸಿ ವಾಹನ ಅಡ್ಡಗಟ್ಟಿ ₹7.11 ಕೋಟಿ ದರೋಡೆ ಪ್ರಕರಣದಲ್ಲಿ ಸಿದ್ದಾಪುರ ಠಾಣೆಯ ಪೊಲೀಸರು, ಹೊರ ರಾಜ್ಯದ ಟೋಲ್‌ವೊಂದರಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಡೇರಿ ವೃತ್ತದ ಮೇಲ್ಸೇತುವೆಯಲ್ಲಿ ನ.19ರಂದು ವಾಹನ ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು. ದರೋಡೆಯ ಬಳಿಕ ಆರೋಪಿಗಳು ಆಂಧ್ರಪ್ರದೇಶದತ್ತ ಹೊರಟಿದ್ದರು. ಮಾರ್ಗದ ಮಧ್ಯೆ ಇನೊವಾಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ಹೊರರಾಜ್ಯಕ್ಕೆ ಪೊಲೀಸ್ ತಂಡ ತೆರಳಿತ್ತು.
ದರೋಡೆ ಗುಂಪಿನಲ್ಲಿದ್ದ ಚಾಲಕನನ್ನು ಶೇಖ್‌ಪುರ ಟೋಲ್‌ನಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆಯಲ್ಲಿದ್ದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆ ಚಾಲಕ ನೀಡಿದ ಮಾಹಿತಿ ಆಧರಿಸಿ ಆಂಧ್ರಪ್ರದೇಶದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಇತರೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.
‘ದರೋಡೆಗೆ ಮೂರು ತಿಂಗಳಿಂದ ಆರೋಪಿಗಳು ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ. ದರೋಡೆ ಮಾಡಿದ ಹಣವನ್ನು ಚಿತ್ತೂರಿನಲ್ಲಿ ಬಚ್ಚಿಟ್ಟು ಬೆಂಗಳೂರಿಗೆ ಬಂದು ತಮ್ಮ ಕೆಲಸದಲ್ಲಿ ತೊಡಗಬೇಕು ಎಂದು ರವಿ ನಿರ್ಧರಿಸಿದ್ದ. ಕೆಲವು ದಿನ ಕಳೆದ ಮೇಲೆ ಹಣ ಹಂಚಿಕೊಳ್ಳಬೇಕು ಎಂಬ ಯೋಜನೆಯನ್ನು ಎಲ್ಲ ಆರೋಪಪಿಗಳು ಸೇರಿಕೊಂಡು ರೂಪಿಸಿದ್ದರು ಎಂಬುದು ಗೊತ್ತಾಗಿದೆ.
ಒಂಬತ್ತು ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.