ADVERTISEMENT

₹ 72 ಲಕ್ಷದೊಂದಿಗೆ ಕಸ್ಟೋಡಿಯನ್ ಪರಾರಿ

* ಎಟಿಎಂ ಘಟಕಗಳಿಗೆ ತುಂಬಬೇಕಿದ್ದ ಹಣ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:54 IST
Last Updated 11 ಅಕ್ಟೋಬರ್ 2017, 19:54 IST
₹ 72 ಲಕ್ಷದೊಂದಿಗೆ ಕಸ್ಟೋಡಿಯನ್ ಪರಾರಿ
₹ 72 ಲಕ್ಷದೊಂದಿಗೆ ಕಸ್ಟೋಡಿಯನ್ ಪರಾರಿ   

ಬೆಂಗಳೂರು: ಎಟಿಎಂ ಘಟಕಗಳಿಗೆ ತುಂಬಬೇಕಿದ್ದ ₹ 72 ಲಕ್ಷ ನಗದು ಸಮೇತ ಪರಾರಿಯಾಗಿರುವ ‘ಸಿಸ್ಕೊ’ ಏಜೆನ್ಸಿಯ ಇಬ್ಬರು ಕಸ್ಟೋಡಿಯನ್‌ಗಳ ಬಂಧನಕ್ಕೆ ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸರು ಬಲೆ ಬೀಸಿದ್ದಾರೆ.

ಸಿಸ್ಕೊ ಸಂಸ್ಥೆಯು ನಗರದಲ್ಲಿ ವಿವಿಧ ಬ್ಯಾಂಕ್‌ಗಳ 2,000 ಎಟಿಎಂ ಘಟಕಗಳಿಗೆ ಹಣ ತುಂಬುವ ಒಪ್ಪಂದ ಮಾಡಿಕೊಂಡಿದೆ. ಎರಡು ವರ್ಷಗಳಿಂದ ಈ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಜಾನ್ಸನ್ ಹಾಗೂ ಕಾರ್ತಿಕ್, ಸೆ.25ರಂದು ಹಣದೊಂದಿಗೆ ಪರಾರಿಯಾಗಿದ್ದಾರೆ.

ಆನಂತರ ಆರೋಪಿಗಳನ್ನು ಫೋನ್ ಮೂಲಕ ಸಂಪರ್ಕಿಸಿದ್ದ ಏಜೆನ್ಸಿ ಅಧಿಕಾರಿಗಳು, ಹಣ ಮರಳಿಸಲು ಹತ್ತು ದಿನಗಳ ಗಡುವು ನೀಡಿದ್ದರು. ಅವರು ಬಾರದ ಕಾರಣಕ್ಕೆ ಅ.5ರಂದು ದೂರು ಕೊಟ್ಟಿದ್ದಾರೆ ಎಂದು ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸರು ತಿಳಿಸಿದರು.

ADVERTISEMENT

‘ಎಂ.ಜಿ.ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್, ಆಸ್ಟಿನ್‌ಟೌನ್ ಹಾಗೂ ಅಶೋಕನಗರ ಸುತ್ತಮುತ್ತಲ ಎಟಿಎಂಗಳಿಗೆ ಹಣ ತುಂಬುವ ಹೊಣೆಯನ್ನು ಜಾನ್ಸನ್ ಹಾಗೂ ಕಾರ್ತಿಕ್‌ಗೆ ನೀಡಲಾಗಿತ್ತು. ಅವರ ಕೈಕೆಳಗೆ ಭದ್ರತಾ ಸಿಬ್ಬಂದಿ, ವಾಹನ ಚಾಲಕರು ಸೇರಿ 15 ಮಂದಿ ಕೆಲಸ ಮಾಡುತ್ತಿದ್ದರು. ಕಸ್ಟೋಡಿಯನ್‌ಗಳಾದ ಕಾರಣ ಅವರಿಗೆ ಎಟಿಎಂ ಯಂತ್ರಗಳ ಪಾಸ್‌ವರ್ಡ್‌ ಹಾಗೂ ಕೀಯನ್ನು ನೀಡಲಾಗಿತ್ತು’ ಎಂದು ಸಿಸ್ಕೊ ಏಜೆನ್ಸಿಯ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಅರವಿಂದ್ ಪಾಂಡೆ ದೂರಿನಲ್ಲಿ ತಿಳಿಸಿದ್ದಾರೆ.

ಬೈದಿದ್ದಕ್ಕೆ ಪ್ರತೀಕಾರ: ‘ಜಾನ್ಸನ್ ಹಾಗೂ ಕಾರ್ತಿಕ್ ಎಟಿಎಂ ಘಟಕವೊಂದಕ್ಕೆ ₹ 50 ಸಾವಿರ ಕಡಿಮೆ ತುಂಬಿ, ಆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ಈ ಬಗ್ಗೆ ದೂರು ಬಂದಿದ್ದರಿಂದ ಏಜೆನ್ಸಿಯ ಮೇಲ್ವಿಚಾರಕ ವೇದಮೂರ್ತಿ ಅವರು ಸೆ.25ರಂದು ಇಬ್ಬರಿಗೂ ಬೈದಿದ್ದರು.

ಅಲ್ಲದೆ, ಹಣ ಮರಳಿಸದಿದ್ದರೆ ಕೆಲಸದಿಂದ ತೆಗೆದು ಹಾಕುವ ಎಚ್ಚರಿಕೆಯನ್ನೂ ನೀಡಿದ್ದರು. ಇದೇ ಸಿಟ್ಟಿನಲ್ಲಿ ಆರೋಪಿಗಳು ಹಣ ತೆಗೆದುಕೊಂಡು ಪರಾರಿಯಾಗಿರುವ ಸಾಧ್ಯತೆ ಇದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸೆ.25ರ ಮಧ್ಯಾಹ್ನ ಡಿಸ್ಪೆನ್ಸರಿ ರಸ್ತೆ ಹಾಗೂ ಎ.ಜಿ.ರಸ್ತೆಯ 12 ಎಟಿಎಂ ಘಟಕಗಳಿಗೆ ತುಂಬಲು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ₹ 72 ಲಕ್ಷ  ಪಡೆದಿದ್ದ ಆರೋಪಿಗಳು, ಮಾರ್ಗಮಧ್ಯೆ ಸಹ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಹಣದೊಂದಿಗೆ ಪರಾರಿಯಾಗಿದ್ದಾರೆ. ಅವರ ಮೊಬೈಲ್‌ಗಳು ಸ್ವಿಚ್ಡ್‌ಆಫ್ ಆಗಿದ್ದು, ಸಿಬ್ಬಂದಿಯ ವಿಶೇಷ ತಂಡಗಳು ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ತೆರಳಿವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.