ADVERTISEMENT

₹75 ಲಕ್ಷ ಡ್ರಾ: ಜೆಡಿಎಸ್ ಅಭ್ಯರ್ಥಿ ವಿರುದ್ಧ ಎಫ್‌ಐಆರ್‌

ಅಕ್ರಮವಾಗಿ ಸಂಗ್ರಹಿಸಿದ್ದ ವಸ್ತುಗಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:46 IST
Last Updated 16 ಮೇ 2018, 19:46 IST

ಬೆಂಗಳೂರು: ಕೆನರಾ ಬ್ಯಾಂಕ್‌ನಿಂದ ₹75 ಲಕ್ಷ ಡ್ರಾ ಮಾಡಿಕೊಂಡು ಪ್ರಚಾರ ಸಾಮಗ್ರಿಗಳನ್ನು ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಯಶವಂತಪುರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸ್ಥಳೀಯ ’ಮಂಜುನಾಥ್ ಟ್ರೇಡಿಂಗ್‌’ ಕಂಪನಿ ಕಚೇರಿ ಮೇಲೆ ಮೇ 11ರಂದು ದಾಳಿ ಮಾಡಿದ್ದ ಚುನಾವಣಾಧಿಕಾರಿಗಳು, ₹60 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು. ದಾಳಿ ಸಂಬಂಧ ಅಧಿಕಾರಿ ವಿ.ನಂಜಪ್ಪ ನೀಡಿದ ದೂರಿನನ್ವಯ ಮೇ 14ರಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

ನಂಜಪ್ಪ ಅವರಿಗೆ ಮೇ 11ರಂದು ಕರೆ ಮಾಡಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು, ನಾಗರಬಾವಿಯ ಕೆನರಾ ಬ್ಯಾಂಕ್‌ನಿಂದ ’ಮಂಜುನಾಥ್ ಟ್ರೇಡಿಂಗ್‌’ ಹೆಸರಿನಲ್ಲಿ ₹75 ಲಕ್ಷ ಡ್ರಾ ಮಾಡಿಕೊಳ್ಳಲಾಗಿದೆ. ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯೇ? ಎಂಬುದನ್ನು ಪರಿಶೀಲಿಸಿ ಎಂದಿದ್ದರು.

ADVERTISEMENT

ಅದರಂತೆ, ಅಧಿಕಾರಿಗಳ ತಂಡವು ’ಮಂಜುನಾಥ್ ಟ್ರೇಡಿಂಗ್‌’ ಕಂಪನಿ ಕಚೇರಿಗೆ ಹೋಗಿ ಪರಿಶೀಲನೆ ನಡೆಸಿತ್ತು. ಜವರಾಯಿಗೌಡ ಅವರಿಗೆ ಸೇರಿದ್ದ ಜೆಡಿಎಸ್‌ ಪಕ್ಷದ ಚಿಹ್ನೆಯುಳ್ಳ 52 ಟೀ ಶರ್ಟ್‌, 1,200 ಟೋಪಿಗಳು, 9,000 ಬ್ಯಾಡ್ಜ್‌ ಹಾಗೂ 6,000 ಕರಪತ್ರಗಳು ಸಿಕ್ಕಿದ್ದವು ಎಂದರು.

ಡ್ರಾ ಮಾಡಿಕೊಂಡ ಹಣಕ್ಕೆ ಕಂಪನಿಯ ಪ್ರತಿನಿಧಿಗಳು ಯಾವುದೇ ದಾಖಲೆ ಸಹ ನೀಡಿರಲಿಲ್ಲ. ಜತೆಗೆ, ಪ್ರಚಾರ ಸಾಮಗ್ರಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ದೂರಿನಲ್ಲಿ ನಂಜಪ್ಪ ತಿಳಿಸಿದ್ದಾರೆ ಎಂದು ಪೊಲೀಸರು ವಿವರಿಸಿದರು.
*
‘ಶೀಘ್ರವೇ ನೋಟಿಸ್‌’
ದಾಳಿ ಸಂಬಂಧ ಆರಂಭದಲ್ಲಿ ಗಂಭೀರವಲ್ಲದ ಪ್ರಕರಣ (ಎನ್‌ಸಿಆರ್‌) ಎಂದು ನಮೂದು ಮಾಡಿಕೊಂಡಿದ್ದೆವು. ನ್ಯಾಯಾಲಯದ ಸೂಚನೆಯಂತೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ವಿಚಾರಣೆಗೆ ಬರುವಂತೆ ಜವರಾಯಿಗೌಡರಿಗೆ ಸದ್ಯದಲ್ಲೇ ನೋಟಿಸ್‌ ನೀಡಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.