ADVERTISEMENT

9 ರೂ ಕೊಟ್ಟು, ಪಡೆಯುವುದು 22 ಲಕ್ಷ!

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಬೆಂಗಳೂರು: ಕ್ವೀನ್ಸ್ ರಸ್ತೆಯ ಮಿಲ್ಲರ್ಸ್‌ ಟ್ಯಾಂಕ್ ಬಂಡ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ `ಕಾಂಟಿನೆಂಟಲ್ ಎಕ್ಸ್‌ಪೋರ್ಟರ್ಸ್‌~ ಸಂಸ್ಥೆ ಬಿಬಿಎಂಪಿಗೆ ನೀಡುತ್ತಿರುವ ವಾರ್ಷಿಕ ಬಾಡಿಗೆ ರೂ 100. ಸಂಸ್ಥೆ ಅದನ್ನು ಬೇರೊಬ್ಬರಿಗೆ ಬಾಡಿಗೆಗೆ ನೀಡಿ ತಿಂಗಳಿಗೆ ಪಡೆಯುತ್ತಿರುವುದು ರೂ 22 ಲಕ್ಷ!

ಇದನ್ನು ಈಗ ವಕೀಲ ಎಸ್.ಉಮೇಶ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಪ್ರಶ್ನಿಸಿದ್ದಾರೆ. 1976ರಲ್ಲಿ ವಾರ್ಷಿಕ 100 ರೂಪಾಯಿಗಳ ಬಾಡಿಗೆಯಂತೆ 99 ವರ್ಷಗಳ ಅವಧಿಗೆ ನೀಡಿರುವ ಗುತ್ತಿಗೆಯನ್ನು ರದ್ದು ಮಾಡಲು ಬಿಬಿಎಂಪಿಗೆ ಆದೇಶಿಸುವಂತೆ ಅವರು ಕೋರಿದ್ದಾರೆ.

ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ಪಾಲಿಕೆ ಆಯುಕ್ತರು ಹಾಗೂ ಸಂಸ್ಥೆಯ ಮಾಲೀಕ ಕೆ.ಸಂಪತ್‌ರಾಜ್ ಅವರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

`ಸುಮಾರು 9000 ಚದರ ಅಡಿ ವಿಸ್ತೀರ್ಣದ ನಿವೇಶನ ಇದಾಗಿದೆ. ಇಲ್ಲಿ ಬಹುಮಹಡಿಗಳ ಕಟ್ಟಡ ನಿರ್ಮಾಣ ಮಾಡಿರುವ ಸಂಸ್ಥೆ, ಹಲವಾರು ಕಚೇರಿಗಳನ್ನು ನಡೆಸುತ್ತಿದೆ. ಇದರಿಂದ ತಿಂಗಳಿಗೆ 22 ಲಕ್ಷ ರೂಪಾಯಿ ಪಡೆಯುತ್ತಿದೆ. ಆದರೆ ತಿಂಗಳಿಗೆ ಒಂಬತ್ತು ರೂಪಾಯಿ ಬಾಡಿಗೆಯನ್ನು ಪಾಲಿಕೆಗೆ ಅದು ನೀಡುತ್ತಿದೆ. ಈ ಜಾಗ ನಗರದ ಹೃದಯದ ಭಾಗದಲ್ಲಿ ಇದೆ.
 
ಲಕ್ಷಾಂತರ ರೂಪಾಯಿ ಬೆಲೆಬಾಳುವ ಈ ಜಾಗವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಬಾಡಿಗೆಗೆ ನೀಡಿರುವ ಪಾಲಿಕೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದೆ. ಈ ಬಗ್ಗೆ ಪಾಲಿಕೆಯಲ್ಲಿ ದೂರು ದಾಖಲು ಮಾಡಿದರೂ ಪ್ರಯೋಜನ ಆಗಿಲ್ಲ~ ಎಂದು ಅರ್ಜಿದಾರರು ದೂರಿದ್ದಾರೆ. ವಿಚಾರಣೆಯನ್ನು ಮುಂದೂಡಲಾಗಿದೆ.

ಬಡಾವಣೆ ನಿರ್ಮಾಣ: ಮಾಹಿತಿಗೆ ಆದೇಶ

ವಿವಿಧ ಬಡಾವಣೆಗಳ ನಿರ್ಮಾಣಕ್ಕೆಂದು ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಪೈಕಿ ಇದುವರೆಗೆ ಕಟ್ಟಡ ನಿರ್ಮಾಣಗೊಳ್ಳದ ನಿವೇಶನಗಳ ಮಾಹಿತಿ ನೀಡುವಂತೆ ಹೈಕೋರ್ಟ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಮಂಗಳವಾರ ನಿರ್ದೇಶಿಸಿದೆ.

ಅರ್ಕಾವತಿ ಲೇಔಟ್, ಅಂಜನಾಪುರ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳಿಗೆ ಸಂಬಂಧಿಸಿದಂತೆ ಬುಧವಾರ ದಾಖಲೆಗಳನ್ನು ನೀಡುವಂತೆ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಆದೇಶಿಸಿದ್ದಾರೆ.

`ಬಿಡಿಎ ಕಾಯ್ದೆಯ 65ನೇ ಕಲಮಿನ ಅನ್ವಯ ಬಡಾವಣೆಗೆ ಜಮೀನು ಸ್ವಾಧೀನ ಪಡಿಸಿಕೊಂಡ ಎರಡು ವರ್ಷಗಳಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು. ಇದನ್ನು ಎಷ್ಟರಮಟ್ಟಿಗೆ ಪಾಲಿಸಲಾಗಿದೆ ಎಂಬ ಬಗ್ಗೆ ನಮಗೆ ಮಾಹಿತಿ ಬೇಕಿದೆ. ಎಷ್ಟು ನಿವೇಶನ ಇನ್ನೂ ಖಾಲಿ ಇದೆ, ಅದಕ್ಕೆ ಕಾರಣ ಏನು ಇತ್ಯಾದಿ ಮಾಹಿತಿ ನೀಡಿ~ ಎಂದು ಸೂಚಿಸಿದೆ.

ಕೆಂಗೇರಿ, ಯಶವಂತಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನಿನ ಪೈಕಿ ಸ್ವಾಧೀನ ಪ್ರಕ್ರಿಯೆಯಿಂದ ಕೆಲವು ಜಮೀನುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಭೂಮಾಲೀಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

`ಒಟ್ಟಾರೆ 4,814 ಎಕರೆ ಜಮೀನನ್ನು ಪ್ರಾಥಮಿಕ ಅಧಿಸೂಚನೆಯಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅಂತಿಮ ಅಧಿಸೂಚನೆ ವೇಳೆ 771 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಈ ಪೈಕಿ ನಗರಾಭಿವೃದ್ಧಿ ಇಲಾಖೆ ಕೈಬಿಟ್ಟಿರುವುದು ಕೇವಲ 35 ಎಕರೆ. ಉಳಿದ ಜಮೀನನ್ನು ಬಿಡಿಎ ಕೈಬಿಟ್ಟಿದೆ~ ಎಂದು ಸರ್ಕಾರದ ಪರ ವಕೀಲ ಮಲ್ಲಿಕಾರ್ಜುನ ಅವರು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಆದುದರಿಂದ ಉಳಿದ ಬಡಾವಣೆಗಳ ಮಾಹಿತಿಗಳನ್ನೂ ನ್ಯಾಯಮೂರ್ತಿಗಳು ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.