ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕಾಯಕದಲ್ಲಿ ಸಮರ್ಪಣೆ ಹಾಗೂ ಶ್ರೇಷ್ಠ ಮನೋಭಾವ ಬೆರೆತಾಗ ಉತ್ತಮ ಸಮಾಜ ನಿರ್ಮಾಣವಾಗಲಿದೆ. ವಚನಕಾರರು ಇದನ್ನೇ ಕಾಯಕವೇ ಕೈಲಾಸ ಎಂದು ಕರೆದಿದ್ದಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ತಿಳಿಸಿದರು.
ಅಮ್ಮ ಪ್ರಕಾಶನ ಸಂಸ್ಥೆಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವರಾಜ ಯಲಿಗಾರ ಅವರ ‘ನನ್ನೊಳಗಿನ ನಾನು ನೀನೇ’ (ಮೈ ಮೀ ಇಸ್ ಥಿ !) ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಸತತ ಪ್ರಯತ್ನ ಹಾಗೂ ಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ. ಹಾಗಾಗಿ ನಮ್ಮ ಗುರಿಯೊಂದಿಗೆ ಶ್ರೇಷ್ಠ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಬೇಕು. ಆಗ ಶ್ರೇಷ್ಠ ಭಾರತ ನಿರ್ಮಿಸಲು ಸಾಧ್ಯ’ ಎಂದು ಸಲಹೆ ನೀಡಿದರು.
ಪೊಲೀಸ್ ವೃತ್ತಿಯ ಅನೇಕ ಜವಾಬ್ದಾರಿಗಳ ಮಧ್ಯೆಯೂ ಸಹ ಬಸವರಾಜ ಯಲಿಗಾರ ಅವರು ವಚನಗಳನ್ನು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಭಾಷಾಂತರಿಸಿ ಕೃತಿಯೊಂದನ್ನು ರಚಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡಿ, ‘ವಚನ ಸಾಹಿತ್ಯ ಕನ್ನಡ ಸಾಹಿತ್ಯದ ವಿಶಿಷ್ಠ ಕೊಡುಗೆಯಾಗಿದೆ. ಯಾವ ಭಾಷಾ ಸಾಹಿತ್ಯದಲ್ಲೂ ಈ ಪ್ರಕಾರವಿಲ್ಲ. ವಚನ ಸಾಹಿತ್ಯವು ಮನುಷ್ಯನನ್ನು ಮನುಷ್ಯನ ಹಾಗೆ ಕಾಣುವ ಕಾಣ್ಕೆಯನ್ನು ಜಗತ್ತಿಗೆ ನೀಡಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಚಿಂತಕ ಜಂಬುನಾಥ್ ಮಳಿಮಠ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಕೆಎಸ್‌ಆರ್‌ಪಿ ಐಜಿಪಿ ಸಂದೀಪ ಪಾಟೀಲ್, ಶರಣ ಚಿಂತಕ ಮಹಾಂತೇಶ್ ಬಿರಾದಾರ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪದ್ಮಿನಿ ನಾಗರಾಜು, ಬಿ. ನಾಗನಗೌಡ, ವೀರೇಶ್ ಹಿರೇಮಠ, ಫ್ಲಾರಿಡಾ ವಿಶ್ವವಿದ್ಯಾಲಯದ ಗಿಲ್‌ಬೆನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.