ADVERTISEMENT

ಪ್ರಜೆಗೆ ತೀರ್ಪು ವಿಮರ್ಶೆಯ ಹಕ್ಕಿದೆ: ಎಚ್.ಎನ್.ನಾಗಮೋಹನ ದಾಸ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 20:39 IST
Last Updated 20 ನವೆಂಬರ್ 2020, 20:39 IST

ಬೆಂಗಳೂರು: ‘ನ್ಯಾಯಾಲಯ ನೀಡುವ ತೀರ್ಪಿನ ಕುರಿತು ವಿಮರ್ಶೆ ಮಾಡುವ ಹಕ್ಕು ದೇಶದ ಪ್ರತಿ ಪ್ರಜೆಗೂ ಇದೆ. ಆದರೆ, ವಿಮರ್ಶೆ ಮಾಡುವ ವಿಧಾನ ನಿಯಮಗಳನ್ನು ಧ್ವಂಸ ಮಾಡುವ ಅಥವಾ ನಂಬಿಕೆ ಹಾಳು ಮಾಡುವಂತಹ ಹಾದಿಯಲ್ಲಿರದೆ, ಆರೋಗ್ಯಕರ ಮತ್ತು ರಚನಾತ್ಮಕ ಚೌಕಟ್ಟಿನಲ್ಲಿರಬೇಕು’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ತಿಳಿಸಿದರು.

ಸಂವಿಧಾನ ಓದು ಅಭಿಯಾನ ಸಮಿತಿ ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನ್ಯಾಯಾಂಗದ ತೀರ್ಪುಗಳು: ನ್ಯಾಯದಾನ ಕಲ್ಪನೆ, ವಾಸ್ತವ, ಭವಿಷ್ಯದ ದಾರಿ’ ವೆಬಿನಾರ್ ನಲ್ಲಿ ಅವರು ಮಾತನಾಡಿದರು.

‘ನ್ಯಾಯಾಧೀಶರನ್ನು ಉದ್ದೇಶಿಸಿ ವಿಮರ್ಶೆ ಮಾಡಬಾರದು. ಇದು ವೈಯಕ್ತಿಕ ದ್ವೇಷಕ್ಕೆ ಕಾರಣವಾಗುತ್ತದೆ. ನ್ಯಾಯಾಲಯವೂ ತನ್ನ ತಪ್ಪು ತಿದ್ದಿಕೊಳ್ಳಬೇಕು. ಇದರಿಂದ ಭವಿಷ್ಯದ ತೀರ್ಪು ಮೇಲ್ಮಟ್ಟಕ್ಕೆ ತಲುಪಬಹುದು. ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗವೂ ವಿಶ್ವಾಸ ಕಳೆದುಕೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು (ಪಿಐಎಲ್) ಸಮಾಜಕ್ಕೆ ಅಗತ್ಯ. ಆದರೆ, ಎಲ್ಲ ಸಮಸ್ಯೆಗಳಿಗೆ ಪಿಐಎಲ್ ಪರಿಹಾರವಲ್ಲ. ಜನರು ಇದನ್ನು ಸದ್ಬಳಕೆಗಿಂತ ವೈಯಕ್ತಿಕ ಹಾಗೂ ರಾಜಕೀಯವಾಗಿ ದುರುಪಯೋಗ ಮಾಡಿಕೊಂಡಿರುವುದೇ ಹೆಚ್ಚು. ಇದರಿಂದಾಗಿ ನ್ಯಾಯಾಲಯವೂ ಕೆಲವೊಮ್ಮೆ ಹಿಂದೆ ಸರಿದಿರಬಹುದು. ಸಾಮಾಜಿಕ ಸಮಸ್ಯೆಗಳಿಗೆ ಪಿಐಎಲ್ ಅಗತ್ಯವಿದೆ ಎನ್ನಬಹುದೇ ಹೊರತು ಇದೇ ಮದ್ದಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಮಹಿಳಾ ಅಸಮಾನತೆ' ಕುರಿತು ಮಾತನಾಡಿದ ಹಿರಿಯ ವಿಮರ್ಶಕ ಪ್ರೊ.ಸಿ.ಎನ್ ರಾಮಚಂದ್ರನ್,' ಇಡೀ ಪ್ರಪಂಚದಲ್ಲಿ ಮಹಿಳೆಯರಿಗೆ ಸೂಕ್ತವಲ್ಲದ ಜಾಗ ಎಂದು ಭಾರತವನ್ನು ಕರೆಯಲಾಗುತ್ತಿದೆ. ಇಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಜೀವನದ ಹಲವು ಘಟ್ಟಗಳಲ್ಲಿ ಜಾತಿ ವ್ಯವಸ್ಥೆ ಗೋಚರಿಸಿರುತ್ತದೆ.
ಆದರೆ, ಅಪರಾಧಗಳ ವಿಷಯಕ್ಕೆ ಬಂದಾಗ ಅನ್ಯಾಯಕ್ಕೆ ಗುರಿಯಾದ ಮಹಿಳೆಯ ಜಾತಿ ಉಲ್ಲೇಖಿಸುವುದಿಲ್ಲ’ ಎಂದರು.

‘ವರದಿಯೊಂದರ ಪ್ರಕಾರ ಪ್ರತಿ ದಿನ ನಾಲ್ಕು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾರೆ. ಸಾಮಾಜಿಕ ಶ್ರೇಣಿಯಲ್ಲಿ ಕೆಳಮಟ್ಟದಲ್ಲಿರುವ ಮಹಿಳೆಯರೇ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ. ನ್ಯಾಯಾಲಯಗಳಲ್ಲಿನ ಸಹಿಸಲಾರದ ವಿಳಂಬದಿಂದ ಬೇಸತ್ತಿದ್ದಾರೆ. ಕಾನೂನು ಮಹಿಳೆಯರನ್ನೂ ಪುರುಷರಿಗೆ ಸಮಾನವಾಗಿ ಗೌರವಿಸಬೇಕು. ಇದಕ್ಕಾಗಿ ಮಹಿಳಾ ಪರ ಕಾನೂನುಗಳನ್ನು ಬಲಗೊಳಿಸಬೇಕು’ ಎಂದು ವಿವರಿಸಿದರು.

ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿದರು. ಅಖಿಲ ಭಾರತ ವಕೀಲರ ಒಕ್ಕೂಟ ಉಪಾಧ್ಯಕ್ಷ ಯಶವಂತ ಮರೋಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.