ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳಿಗೆ ಒಂದು ತಿಂಗಳಲ್ಲಿ ‘ಸ್ವಚ್ಛ ನೋಟ’ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ತಿಳಿಸಿದರು.
‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾವ ಕೆಲಸ ಮಾಡಬೇಕು ಎಂಬುದನ್ನು ನಮಗೆ ತಿಳಿಸಿದ್ದಾರೆ. ಅದರಂತೆ ಕಾರ್ಯಗಳನ್ನು ಅನುಷ್ಠಾನ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.
‘ನಗರ ಸ್ವಚ್ಛವಾಗಿರಬೇಕು ಎಂದು ಕಟ್ಟಡ ತ್ಯಾಜ್ಯ ಮತ್ತು ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸುವ ಅಭಿಯಾನವನ್ನು ನಡೆಸಲಾಯಿತು. ಶೇಕಡ 90ರಷ್ಟು ಯಶಸಾಧಿಸಲಾಗಿದ್ದು, ಸ್ವಚ್ಛತಾ ಕಾರ್ಯ ಮುಂದುವರಿದಿದೆ’ ಎಂದರು.
‘ಮಳೆಗಾಲದ ಸಂದರ್ಭದಲ್ಲಿ ಅತಿಹೆಚ್ಚು ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳು ಹಾಗೂ ರಸ್ತೆಯಲ್ಲಿ ನೀರು ತುಂಬಿಕೊಳ್ಳುವ ಸ್ಥಳಗಳನ್ನು ಗುರುತಿಸಲಾಗಿದ್ದು, ಹಲವೆಡೆ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಲಾಗಿದೆ. ಸಂಚಾರ ವಿಭಾಗದ ಪೊಲೀಸರ ನೆರವಿನೊಂದಿಗೆ ಅವರು ಶಿಫಾರಸು ಮಾಡಿರುವ ಸ್ಥಳಗಳನ್ನೂ ಪಟ್ಟಿ ಮಾಡಿ ಪರಿಹಾರ ಕಾರ್ಯ ಕೈಗೊಂಡಿದ್ದೇವೆ’ ಎಂದು ಹೇಳಿದರು.
ಮಹದೇವಪುರ, ನಾಗವಾರ ಹಾಗೂ ನಾಯಂಡಳ್ಳಿಯ ಕೆಲವು ಪ್ರದೇಶಗಳಲ್ಲಿ ಒತ್ತುವರಿಯಿಂದ ಪ್ರವಾಹ ಉಂಟಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚೆ ನಡೆಸಲಾಗಿದ್ದು, ಒತ್ತುವರಿ ತೆರವಿಗೆ ಸೂಕ್ತ ಆದೇಶಗಳನ್ನು ಪಡೆಯಲಾಗುತ್ತದೆ ಎಂದರು.
ಬಿಎಂಆರ್‌ಸಿಎಲ್ ಕಾಮಗಾರಿಯಿಂದ ಮಳೆ ನೀರು ನಿಲ್ಲುವ ಪ್ರಕರಣಗಳಿದ್ದು, ಬಿಬಿಎಂಪಿ– ಬಿಎಂಆರ್‌ಸಿಎಲ್‌ನೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ಹೊಂದಿರುವ ಮಹೇಶ್ವರ ರಾವ್ ತಿಳಿಸಿದರು.
ಕಾಮಗಾರಿ ಮುಗಿಸಲು ಸೂಚನೆ: ನಗರದಲ್ಲಿ ಕೆಪಿಟಿಸಿಎಲ್, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ನಡೆಸುತ್ತಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವ ಮುನ್ನ ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನಿಗಾ ವಹಿಸಬೇಕು. ಯೋಜನೆ ವಿಭಾಗದ ವಿಶೇಷ ಆಯುಕ್ತರು ಹಾಗೂ ವಲಯ ಆಯುಕ್ತರಿಗೆ ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ಮಾರುಕಟ್ಟೆಗಳ ಮರು ಅಭಿವೃದ್ಧಿ ಹಾಗೂ ಅವುಗಳಿಂದ ಹೆಚ್ಚಿನ ಆದಾಯ ಬರುವಂತೆ ಮಾಡಲು ವಿಶೇಷ ಯೋಜನೆಯನ್ನು ರೂಪಿಸಲಾಗುತ್ತದೆ. ಕೆಲವು ದಿನಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ನಗರದಲ್ಲಿರುವ ಎಲ್ಲ ಉದ್ಯಾನಗಳನ್ನು ಬಿಬಿಎಂಪಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿದೆ. ತನ್ನ ಬಡಾವಣೆಗಳಲ್ಲಿರುವ ಉದ್ಯಾನಗಳನ್ನು ಹಸ್ತಾಂತರಿಸುವಂತೆ ಬಿಡಿಎಗೆ ಮನವಿ ಮಾಡಿಕೊಳ್ಳಲಾಗಿದೆ. ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.
1300 ರಸ್ತೆ ಗುಂಡಿ ದುರಸ್ತಿಕ್ಕೆ ಕ್ರಮ
ಬಿಬಿಎಂಪಿ ವ್ಯಾಪ್ತಿಯಲ್ಲಿ 1300 ರಸ್ತೆ ಗುಂಡಿಗಳನ್ನು ದುರಸ್ತಿ ಮಾಡುವ ಕಾಮಗಾರಿ ಚಾಲನೆಯಲ್ಲಿದೆ. ರಸ್ತೆ ಗುಂಡಿ ದುರಸ್ತಿ ನಿರಂತರ ಪ್ರಕ್ರಿಯೆಯಾಗಿದೆ ಎಂದು ಮಹೇಶ್ವರ ರಾವ್ ಹೇಳಿದರು. ಜಲಮಂಡಳಿ ಸೇರಿದಂತೆ ಯಾವುದೇ ಇಲಾಖೆಗಳು ರಸ್ತೆಗಳನ್ನು ಅಗೆದಿದ್ದರೆ ಅವುಗಳನ್ನು ಈ ತಿಂಗಳ ಅಂತ್ಯದೊಳಗೆ ದುರಸ್ತಿ ಮಾಡಲು ಸೂಚಿಸಲಾಗಿದೆ ಎಂದರು.
ಮೆಜೆಸ್ಟಿಕ್ ಸುತ್ತಮುತ್ತ ಪಾದಚಾರಿ ಮಾರ್ಗಗಳು ಹಲವು ಸಮಸ್ಯೆಗಳನ್ನು ಹೊಂದಿದ್ದು ಒಂದು ವಾರದೊಳಗೆ ಇವುಗಳ ನೋಟವನ್ನು ಬದಲಿಸುವುದಾಗಿ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ ವಿಕಾಶ್ ಕಿಶೋರ್ ಭರವಸೆ ನೀಡಿದ್ದಾರೆ ಎಂದು ಹೇಳಿದರು.
‘ಐದು ಕೆಲಸದತ್ತ ಗಮನ’
‘ನಗರದಲ್ಲಿ ಅತ್ಯಂತ ಅಗತ್ಯವಿರುವ ಐದು ಕೆಲಸಗಳತ್ತ ಹೆಚ್ಚು ಗಮನಹರಿಸಲಾಗಿದೆ. ಅವುಗಳನ್ನು ದಕ್ಷತೆಯಿಂದ ನಿರ್ವಹಿಸಿದರೆ ಹಲವು ಸಮಸ್ಯೆಗಳು ಬಗೆಹರಿಯಲಿವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದರು.
‘ಮಳೆಗಾಲದಲ್ಲಿ ಎಲ್ಲೂ ಪ್ರವಾಹದ ಸನ್ನಿವೇಶ ಉಂಟಾಗಬಾರದು ಪಾದಚಾರಿ ಮಾರ್ಗದಲ್ಲಿ ಜನರ ಓಡಾಟಕ್ಕೆ ಅಡೆತಡೆ ಇರಬಾರದು ರಸ್ತೆಬದಿ ಅಥವಾ ಇತರೆಡೆ ಎಲ್ಲೂ ಕಸ ಎಸೆಯುವ ‘ಬ್ಲ್ಯಾಕ್ ಸ್ಪಾಟ್’ಗಳಿರಬಾರದು ಎಲ್ಲೂ ಕತ್ತಲೆ ಇಲ್ಲದಂತೆ ಬೀದಿದೀಪಗಳನ್ನು ನಿರ್ವಹಣೆ ಮಾಡಬೇಕು ತ್ಯಾಜ್ಯ ಸಂಗ್ರಹ– ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗಬಾರದು... ಈ ಐದು ಮೂಲ ಕಾರ್ಯಗಳನ್ನು ನಾವು ದಕ್ಷತೆಯಿಂದ ನಿರ್ವಹಿಸಬೇಕಿದೆ. ಇದರ ಬಗ್ಗೆಯೇ ನಮ್ಮ ಗಮನ ಕೇಂದ್ರೀಕೃತವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.