ADVERTISEMENT

ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಪ್ಪಿದ ಅನಾಹುತ; ಉಳಿಯಿತು 200 ರೋಗಿಗಳ ಜೀವ!

​ಪ್ರಜಾವಾಣಿ ವಾರ್ತೆ
Published 7 ಮೇ 2021, 2:31 IST
Last Updated 7 ಮೇ 2021, 2:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ, ವೈದ್ಯರು ಹಾಗೂ ಇಡೀ ಆಸ್ಪತ್ರೆಯ ಸಹಾಯಕ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ.

ಕ್ಷಿಪ್ರ ಕಾರ್ಯಾಚರಣೆಯಿಂದ ಸಮಯಕ್ಕೆ ಸರಿಯಾಗಿ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಆಮ್ಲಜನಕ ವ್ಯವಸ್ಥೆ ಮಾಡಿದ ಕಾರಣ 200ರಷ್ಟು ಕೋವಿಡ್ ಸೋಂಕಿತರ ಅಮೂಲ್ಯ ಜೀವ ಉಳಿದಿದೆ.

ಆಮ್ಲಜನಕ ವ್ಯವಸ್ಥೆಗೊಳಿಸಿ ಅಮೂಲ್ಯ ಜೀವ ಉಳಿಸುವ ಕಾರ್ಯಾಚರಣೆ ಬುಧವಾರ ಮಧ್ಯರಾತ್ರಿಯಿಂದಲೇ ಆರಂಭಗೊಂಡು ಐದು ತಾಸುಗಳ ವರೆಗೂ ಮುಂದುವರಿಯಿತು. ಅಂತಿಮವಾಗಿ ಜಂಬೋಆಮ್ಲಜನಕ ಸಿಲಿಂಡರ್ ಹಾಗೂಖಾಸಗಿ ಸಂಸ್ಥೆ ಯೂನಿವರ್ಸಲ್‌ನಿಂದ ಟ್ಯಾಂಕರ್ ಸಂಗ್ರಹಿಸಲು ಸಾಧ್ಯವಾಯಿತು.

ADVERTISEMENT

ಬುಧವಾರ ಬೆಳಗ್ಗೆಯಿಂದಲೇ ಆಮ್ಲಜನಕವು ಖಾಲಿಯಾಗುತ್ತಲೇ ಬಂದಿತ್ತು. ಬೆಳಗ್ಗೆ 11 ಗಂಟೆಗೆ ಹೊತ್ತಿಗೆ ಬಳ್ಳಾರಿಯ ಪ್ರಾಕ್ಸಿ ಏರ್‌ ಸಂಸ್ಥೆಯಿಂದ ಆಮ್ಲಜನಕ ಟ್ಯಾಂಕರ್ ಬರಬೇಕಿತ್ತು. ಆದರೆ ರಾತ್ರಿ 11.30 ಆದರೂ ಟ್ಯಾಂಕರ್ ತಲುಪಲಿಲ್ಲ. ಬಳಿಕ ಆ ಟ್ಯಾಂಕರ್ ಖಾಸಗಿ ಆಸ್ಪತ್ರೆಗೆ ಹೋಗಿದೆ ಎಂಬುದು ತಿಳಿದು ಬಂತು. ಬಳಿಕ ವೈದ್ಯಾಧಿಕಾರಿ ಡಾ. ರೇಣುಕಾ ಪ್ರಸಾದ್ ಅವರು ರಾತ್ರಿ 12.30ರ ಹೊತ್ತಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಗಮನಕ್ಕೆ ತಂದರು.

ತಕ್ಷಣ ಕಾರ್ಯಪ್ರವೃತರಾದ ಅಶ್ವತ್ಥನಾರಾಯಣ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮತ್ತು ಹಿರಿಯ ಐಎಎಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರು. ಕೆಲವು ತಾಸುಗಳ ಬಳಿಕ ಯೂನಿವರ್ಸಲ್‌ ಸಂಸ್ಥೆಯಿಂದ ಆಮ್ಲಜನಕ ಟ್ಯಾಂಕರ್ ವ್ಯವಸ್ಥೆ ಕಲ್ಪಿಸುವಲ್ಲಿ ಸಫಲರಾದರು.

ಚಾಮರಾಜನಗರದಲ್ಲಿ ನಡೆದ ದುರಂತ ಕಣ್ಣ ಮುಂದಿರುವಾಗಲೇ ಎದುರಾಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸುವಲ್ಲಿ ಡಿಸಿಎಂ ಯಶಸ್ವಿಯಾದರು. ವಿವಿಧ ಮೂಲಗಳಿಂದ ಬೇಕಾದಷ್ಟು ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಆಮ್ಲಜನಕದ ಸಂಗ್ರಹ ಸೀಮಿತವಾಗಿತ್ತು. ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗಳು ರೋಗಿಗಳ ಆರೋಗ್ಯವನ್ನು ನೋಡಿಕೊಂಡರು. ಸೂಕ್ತ ಸಮಯಕ್ಕೆ ಆಮ್ಲಜನಕ ಸಿಲಿಂಡರ್ ತಲುಪಿಸಲು ಪೊಲೀಸರು ನೆರವಾದರು ಎಂದು ವಿವರಿಸಿದ್ದಾರೆ.

ಒಟ್ಟಿನಲ್ಲಿ ಗುರುವಾರ ನಸುಕಿನ ಜಾವ 4.45ರ ಹೊತ್ತಿಗೆ 20 ಜಂಬೋ ಆಮ್ಲಜನಕ ಸಿಲಿಂಡರ್‌ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಾವೀಗ ನಿಟ್ಟುಸಿರು ಬಿಡುವಂತಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.