ADVERTISEMENT

ಕಾಲ್ತುಳಿತ: ಸ್ಥಳ ಮಹಜರು ನಡೆಸಿದ ಸಿಐಡಿ

ನಾಲ್ವರು ಆರೋಪಿಗಳು ಕೋರ್ಟ್‌ಗೆ ಹಾಜರು

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 18:25 IST
Last Updated 10 ಜೂನ್ 2025, 18:25 IST
   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಕ್ರೀಡಾಂಗಣದ ಬಳಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದರು.

ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳ ತನಿಖೆಯನ್ನೂ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಸಿಐಡಿ ಎಸ್‌ಪಿ ಶುಭನ್ವಿತಾ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

‘ಗೇಟ್‌ ನಂಬರ್ 2, 2ಎ, 6, 7, 16, 17, 18, 21ರ ಬಳಿ ಕಾಲ್ತುಳಿತ ಸಂಭವಿಸಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಜತೆಗೆ, ಗಾಯಾಳುಗಳ ಹೇಳಿಕೆಯನ್ನೂ ದಾಖಲು ಪ್ರಕ್ರಿಯೆ ಆರಂಭವಾಗಿದೆ. ಜೂನ್‌ 4ರಂದು ಸಂಜೆ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಲು ಕಾರಣವೇನು? ಯಾವ ಮಾಹಿತಿ ಆಧರಿಸಿ, ವಿಜಯೋತ್ಸವಕ್ಕೆ ಬಂದಿದ್ದೀರಿ ಎನ್ನುವ ಪ್ರಶ್ನೆ ಕೇಳಿ, ಹೇಳಿಕೆ ದಾಖಲು ಮಾಡಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ADVERTISEMENT

ಆರೋಪಿಗಳು ಕೋರ್ಟ್‌ಗೆ ಹಾಜರು:

‘ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ಮುಖಸ್ಥ ನಿಖಿಲ್ ಸೋಸಲೆ, ಡಿಎನ್‌ಎ ಮ್ಯಾನೇಜ್‌ಮೆಂಟ್ (ಇ–ವೆಂಟ್‌ ಮ್ಯಾನೇಜ್‌ಮೆಂಟ್‌) ಸಿಬ್ಬಂದಿ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಎಂಬುವವರನ್ನು 41ನೇ ಎಸಿಜೆಎಂ ನ್ಯಾಯಾಲಯಕ್ಕೆ ಮಂಗಳವಾರ ಸಂಜೆ ಹಾಜರುಪಡಿಸಿ 10 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಾಯಿತು. ನಿಖಿಲ್‌ ಸೋಸಲೆ ಅವರು ತಮ್ಮ ಬಂಧನದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಹಂತದಲ್ಲಿದೆ. ಹೈಕೋರ್ಟ್‌ ಆದೇಶ ನೋಡಿಕೊಂಡು ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ನೀಡಬೇಕೇ? ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು ಎಂಬುದಾಗಿ ನ್ಯಾಯಾಲಯ ಹೇಳಿದೆ. ಆರೋಪಿಗಳನ್ನು ಮತ್ತೆ ಜೈಲಿಗೇ ಕಳುಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

₹5 ಕೋಟಿ ಪರಿಹಾರಕ್ಕೆ ಆಗ್ರಹ:

ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ ₹5 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ರಾಜಭವನದ ಎದುರು ಪ್ರತಿಭಟನೆ ನಡೆಸಲು ಮುಂದಾದರು. ದುರಂತಕ್ಕೆ ರಾಜ್ಯ ಸರ್ಕಾರವೇ ಕಾರಣವೆಂದು ಆರೋಪಿಸಿದರು. ಸ್ಥಳದಲ್ಲಿದ್ದ ಪೊಲೀಸರು, ಪ್ರತಿಭಟನಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.