ಬೆಂಗಳೂರು: ಶ್ರೀರಾಮ ಅವರ ಬಗ್ಗೆ ಹಮ್ಮಿಕೊಂಡಿರುವ ವಿಚಾರಸಂಕಿರಣಕ್ಕೆ ಪ್ರಬಂಧಗಳನ್ನು ಸಲ್ಲಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ವಿಶ್ವವಿದ್ಯಾಲಯದ ಹಲವು ಬೋಧಕರು, ವಿದ್ಯಾರ್ಥಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಧಾರವಾಡದ ಕರ್ನಾಟಕ ಐತಿಹಾಸಿಕ ಸಂಶೋಧನಾ ಸೊಸೈಟಿ (ಕೆಎಚ್ಆರ್‌ಎಸ್) ಧಾರವಾಡದ ಬಹುಶಿಸ್ತೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ‘ಸಮಕಾಲೀನ ಜೀವನ ಅಧ್ಯಯನಗಳು ಮತ್ತು ಆಧುನಿಕ ಸಮಾಜಕ್ಕಾಗಿ ಶ್ರೀರಾಮನ ಜೀವನದ ಪಾಠಗಳು’ ಬಗ್ಗೆ ರಾಷ್ಟ್ರೀಯ ವಿಚಾರಸಂಕಿರಣವನ್ನು ಸೆಪ್ಟೆಂಬರ್ 10 ಮತ್ತು 11ರಂದು ಧಾರವಾಡದಲ್ಲಿ ಆಯೋಜಿಸಲಾಗಿದೆ.
ಈ ಬಗ್ಗೆ ಆಗಸ್ಟ್ 6ರಂದು ಸುತ್ತೋಲೆ ಹೊರಡಿಸಿರುವ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು, ವಿಚಾರಸಂಕಿರಣದಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸುವಂತೆ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳಿಗೆ ಸೂಚಿಸಿದ್ದಾರೆ. ಸುತ್ತೋಲೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ವೆಬ್‌ಸೈಟ್‌ನಿಂದ ಸುತ್ತೋಲೆಯನ್ನು ಶುಕ್ರವಾರ ತೆಗೆಯಲಾಗಿದೆ.
ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಬಳಸಿಕೊಂಡಿರುವುದಕ್ಕೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಕ್ಷೇತ್ರದ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
‘ಇದು ಕಳವಳಕಾರಿ ಬೆಳವಣಿಗೆ. ಇದರಿಂದ ವಿಶ್ವವಿದ್ಯಾಲಯದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗಲಿದೆ. ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.
‘ಧರ್ಮ ಅಥವಾ ನಮ್ಮ ಸಂಪ್ರದಾಯಗಳನ್ನು ವಿರೋಧಿಸುವುದಿಲ್ಲ, ಆದರೆ, ವಿಶ್ವವಿದ್ಯಾಲಯದೊಳಗೆ ಧರ್ಮವನ್ನು ತರುವುದು ಸರಿಯಲ್ಲ. ವಿಶ್ವವಿದ್ಯಾಲಯವು ಸತ್ಯ ಆಧಾರಿತ ಮತ್ತು ವೈಜ್ಞಾನಿಕ ವಿಷಯಗಳ ಮೇಲೆ ಕೇಂದ್ರೀಕರಿಸಬೇಕು’ ಎಂದು ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.
‘ವಿಶ್ವವಿದ್ಯಾಲಯದ ಜಾತ್ಯತೀತ ತತ್ವವನ್ನೇ ಪ್ರಶ್ನಿಸುವ ಇಂಥ ಸಮ್ಮೇಳನವನ್ನು ಯಾಕೆ ಪ್ರೋತ್ಸಾಹಿಸಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಎಸ್.ಸಿ, ಎಸ್.ಟಿ ಬೋಧಕರ ಸಂಘದ ಅಧ್ಯಕ್ಷ ಜಿ.ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ.
ಈ ಸುತ್ತೋಲೆಯನ್ನು ವಾಪಸ್ ಪಡೆಯಲು ಕುಲಪತಿಯವರಿಗೆ ಮನವಿ ಮಾಡಲಾಗುವುದು. ಅವರು ಸುತ್ತೋಲೆ ವಾಪಸ್ ಪಡೆಯದೇ ಇದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಂ.ಎಸ್. ಜಯಕರ ಮತ್ತು ಕುಲಸಚಿವರ ಪ್ರತಿಕ್ರಿಯೆಗಾಗಿ ಪ್ರಯತ್ನಿಸಲಾಯಿತು. ಆದರೆ, ಅವರು ಮೊಬೈಲ್ ಕರೆಯನ್ನು ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.