ADVERTISEMENT

ಒತ್ತುವರಿಯಲ್ಲಿ ಅರವಿಂದ ಲಿಂಬಾವಳಿ ಭಾಗಿ: ಎಎಪಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 23:14 IST
Last Updated 2 ಆಗಸ್ಟ್ 2021, 23:14 IST

ಬೆಂಗಳೂರು: ‘ಮಹದೇವಪುರ ವ್ಯಾಪ್ತಿಯಲ್ಲಿ ಗೋದ್ರೆಜ್ ಪ್ರಾಪರ್ಟೀಸ್ ಒತ್ತುವರಿ ಪ್ರಕರಣದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರ ನೇರ ಕೈವಾಡವಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದುಆಮ್ ಆದ್ಮಿ ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಆಗ್ರಹಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಗೋದ್ರೆಜ್ ಪ್ರಾಪರ್ಟೀಸ್ ಹಾಗೂ ವಂಡರ್ ಪ್ರಾಜೆಕ್ಟ್ ಡೆವೆಲಪ್ಮೆಂಟ್ ಪ್ರೈವೇಟ್‌ ಲಿಮಿಟೆಡ್ ನಿರ್ಮಿಸಿರುವ ಬಹುಮಹಡಿ ಕಟ್ಟಡವನ್ನು ಕೆಡವಿ, ₹31 ಕೋಟಿ ದಂಡ ಕಟ್ಟಲು ಆದೇಶಿಸಿರುವ ರಾಷ್ಟ್ರೀಯ ಹಸಿರು ಪೀಠದ ಆದೇಶ ಸ್ವಾಗತಾರ್ಹ. ಆದರೆ, ಸ್ಥಳೀಯ ಶಾಸಕರ ಅರಿವಿಗೆ ಬಾರದೆಇಷ್ಟೊಂದು ದೊಡ್ಡ ಅಕ್ರಮ ನಡೆದಿರಲು ಸಾಧ್ಯವಿಲ್ಲ’ ಎಂದರು.

‘ಅರವಿಂದ ಲಿಂಬಾವಳಿ ಅವರು ಚುನಾವಣೆಗಳಲ್ಲಿ ಗೆಲ್ಲಲು ಈ ಪ್ರಭಾವಿ ಕಾರ್ಪೊರೇಟ್ ಕಂಪನಿಗಳ ಬೆಂಗಾವಲಿದೆ. ಅದಕ್ಕಾಗಿ ಇಂತಹ ಅವೈಜ್ಞಾನಿಕ ಯೋಜನೆಗಳಿಗೆ ಅನುಮತಿ ನೀಡಿದ್ದಾರೆ’ ಎಂದು ದೂರಿದರು.

ADVERTISEMENT

‘ಮಹದೇವಪುರ ಕ್ಷೇತ್ರದಲ್ಲಿ ಸರ್ಕಾರಿ ಜಾಗಗಳ ಒತ್ತುವರಿ ಬಗ್ಗೆ ಸರ್ಕಾರ ಕೂಡಲೇ ಪರಿಶೀಲನೆ ನಡೆಸಬೇಕು. ಅಕ್ರಮಗಳಲ್ಲಿ ಅರವಿಂದ ಲಿಂಬಾವಳಿ ಅವರ ಪಾತ್ರದ ಬಗ್ಗೆ ತನಿಖೆಗೆ ಆದೇಶಿಸಬೇಕು.ಈ ಯೋಜನೆಗೆ ಸಹಕರಿಸಿ, ಭ್ರಷ್ಟಾಚಾರ ಎಸಗಿರುವ ಬಿಬಿಎಂಪಿ ಮತ್ತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಈ ಸಂಬಂಧ ಶಾಸಕ ಅರವಿಂದ ಲಿಂಬಾವಳಿ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.