ADVERTISEMENT

ಸಿಗರೇಟ್‌ ಲಂಚ: ಸಿಸಿಬಿ ಎಸಿಪಿ, ಇನ್‌ಸ್ಪೆಕ್ಟರ್‌ಗಳ ಮನೆ ಮೇಲೆ ಎಸಿಬಿ ದಾಳಿ

ಸಿಗರೇಟ್‌ ವಿತರಕರು, ಮಾಸ್ಕ್‌ ತಯಾರಿಕರಿಂದ ಲಂಚ ಪಡೆದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಮೇ 2020, 15:26 IST
Last Updated 22 ಮೇ 2020, 15:26 IST
ಸಿಗರೇಟ್‌ಗಾಗಿ ಲಂಚ (ಪ್ರಾತಿನಿಧಿಕ ಚಿತ್ರ)
ಸಿಗರೇಟ್‌ಗಾಗಿ ಲಂಚ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಸಿಗರೇಟ್‌ ವಿತರಕರು ಹಾಗೂ ನಕಲಿ ಮಾಸ್ಕ್‌ ತಯಾರಿಕಾ ಕಂಪನಿಗಳಿಂದ ಲಂಚ ಪಡೆದ ಆರೋಪಕ್ಕೆ ಒಳಗಾಗಿರುವ ಸಿಸಿಬಿ ಎಸಿಪಿ ಪ್ರಭುಶಂಕರ್‌ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಹಾಗೂ ನಿರಂಜನ ಕುಮಾರ್‌ ಅವರ ಮನೆಗಳೂ ಸೇರಿದಂತೆ ಏಳು ಕಡೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ಬೆಳಗಿನ ಜಾವ ದಾಳಿ ನಡೆಸಿ ಶೋಧಿಸಿದರು.

ಸಿಗರೇಟ್‌ ವಿತರಕರು ಮತ್ತು ಸಿಸಿಬಿ ಅಧಿಕಾರಿಗಳ ನಡುವೆ ಮಧ್ಯವರ್ತಿಗಳಾಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಭೂಷಣ್‌ ಮತ್ತು ಯಲಹಂಕದ ಬಾಬು ರಾಜೇಂದ್ರ ಪ್ರಸಾದ್‌, ಸಿಗರೇಟ್‌ ವಿತರಕರಾದ ಆದಿಲ್‌ ಅಜೀಜ್‌ ಎಂಬುವರ ಮನೆಗಳ ಮೇಲೂ ದಾಳಿ ನಡೆಯಿತು.

ಮೂವರು ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧಎಸಿಬಿಗುರುವಾರ ಎಫ್‌ಐಆರ್‌ ದಾಖಲಿಸಿ, ಮನೆಗಳನ್ನು ಶೋಧಿಸಲು ವಾರೆಂಟ್‌ ಪಡೆದಿತ್ತು. ಆರೋಪಿ ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರು ನಿದ್ದೆಯಿಂದ ಏಳುವ ಮೊದಲೇಎಸಿಬಿಅಧಿಕಾರಿಗಳ ತಂಡಗಳು ಏಕಕಾಲಕ್ಕೆ ಮನೆಗಳ ಬಾಗಿಲು ತಟ್ಟಿ ಶಾಕ್‌ ಕೊಟ್ಟಿವೆ.

ADVERTISEMENT

ಪ್ರಭುಶಂಕರ್ ಮನೆಯಲ್ಲಿ ಡೈರಿಯೊಂದು ಸಿಕ್ಕಿದ್ದು, ಅದರಲ್ಲಿ ಬೇನಾಮಿ ಆಸ್ತಿ ವ್ಯವಹಾರ ಕುರಿತ ಪ್ರಸ್ತಾಪವಿದೆ. ಅಜೀಜ್ ಮನೆಯಲ್ಲೂ ಆಸ್ತಿಪಾಸ್ತಿ ಪತ್ರಗಳು ಸಿಕ್ಕಿವೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಿಸಿಬಿ ಆರ್ಥಿಕ ಅಪರಾಧ ತಡೆ ವಿಭಾಗದಲ್ಲಿದ್ದ ಪ್ರಭುಶಂಕರ್‌, ಅಜಯ್‌ ಹಾಗೂ ನಿರಂಜನ ಕುಮಾರ್, ಲಾಕ್‌ಡೌನ್‌ ಸಮಯದಲ್ಲಿ ವಿವಿಧ ಕಂಪನಿಗಳ ಸಿಗರೇಟ್‌ಗಳನ್ನು ದುಬಾರಿ ಬೆಲೆಗೆ ಮಾರಲು ಅವಕಾಶ ಮಾಡಿಕೊಡಲು ಲಂಚ ಪಡೆದ ಆರೋಪಕ್ಕೆ ಒಳಗಾಗಿದ್ದಾರೆ.

ಸಿಸಿಬಿ‌ ಅಧಿಕಾರಿಗಳು ಲಂಚ ಪಡೆದ ಮೂರು ಪ್ರಕರಣಗಳನ್ನು ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆ (ಪಿ.ಸಿ. ಆ್ಯಕ್ಟ್‌) ಅಡಿ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿ ಪ್ರವೀಣ್‌ ಸೂದ್‌ ಈಚೆಗೆ ಎಸಿಬಿಗೆ ಆದೇಶಿಸಿದ್ದರು. ಇವರ ವಿರುದ್ಧ ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಲಾಗಿದೆ.

ಪ್ರಭುಶಂಕರ್‌ ಮತ್ತವರ ಸಹೋದ್ಯೋಗಿಗಳು ಎಂ.ಡಿ. ಆ್ಯಂಡ್‌ ಸನ್ಸ್‌ ಮತ್ತು ಮಹಾವೀರ್‌ ಟ್ರೇಡರ್ಸ್‌ ಮತ್ತಿತರ ಸಿಗರೇಟ್‌ ವಿತರಕರಿಂದ ₹ 85 ಲಕ್ಷ ಲಂಚ ಪಡೆದ ಆರೋಪಕ್ಕೆ ಓಳಗಾಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಎನ್–‌ 95 ನಕಲಿ ಮಾಸ್ಕ್‌ ತಯಾರಿಸುತ್ತಿದ್ದಾಗ ಸಿಕ್ಕಿಬಿದ್ದ ಆರೋಪಿಗೆ ರಕ್ಷಣೆ ನೀಡಲು ₹ 15 ಲಕ್ಷ ಲಂಚ ಪಡೆದಿದ್ದಾರೆ ಎಂದು ದೂರಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಸಿಬಿ ಡಿಸಿಪಿ ರವಿಕುಮಾರ್‌ ಅಧಿಕಾರಿಗಳ ಬಳಿ ₹ 52 ಲಕ್ಷ ವಶಪಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.